ಜಿಲ್ಲೆ

ಸೊರಬ ಶಾಸಕರು ಹಕ್ಕುಚ್ಯುತಿ ಮಂಡಿಸಿದರೆ ಸ್ವಾಗತ: ಸಿ.ಎಸ್.ಷಡಾಕ್ಷರಿ

ಶಿವಮೊಗ್ಗ: ಸದನದಲ್ಲಿ ಸೊರಬ ಶಾಸಕರು ಹಕ್ಕುಚ್ಯುತಿ ಮಂಡನೆ ಮಾಡಿದರೆ ಸ್ವಾಗತಿಸುತ್ತೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ನೌಕರರಿಗೆ ನೋವಾದಾಗ ಧ್ವನಿಯಾಗುವುದು ನನ್ನ ಕರ್ತವ್ಯ. ಇತ್ತೀಚೆಗೆ ಸೊರಬ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಡಿಸಿ ಕಚೇರಿ ಎದುರು ಕಂದಾಯ ನೌಕರರು ನಡೆಸಿದ ಪ್ರತಿಭಟನೆಗೆ ನನ್ನ ಹಸ್ತಕ್ಷೇಪವಿಲ್ಲ. ಇದರಲ್ಲಿ ನನ್ನ ಕುಮ್ಮಕ್ಕು ಇದೆ ಎಂಬುದು ಶಾಸಕರ ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದರು.

ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆ. ಸರ್ಕಾರ ಕೌನ್ಸಿಲಿಂಗ್ ಪದ್ಧತಿ ವರ್ಗಾವಣೆ ಜಾರಿಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅಲ್ಲದೆ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನಾನು ಇದುವರೆಗೂ ಎಲ್ಲಿಯೂ ಸೊರಬ ಶಾಸಕರ ಹೆಸರು ಪ್ರಸ್ತಾಪ ಮಾಡಿಲ್ಲ. ಕುಮಾರ್ ಬಂಗಾರಪ್ಪ ಅವರು ಮಾಜಿ ಸಿಎಂ ಪುತ್ರ, ಮಾಜಿ ಸಚಿವರು, ಹಾಲಿ ಶಾಸಕರೂ ಆಗಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ ಕುಮಾರ್ ಬಂಗಾರಪ್ಪ ಅವರ ಬಗ್ಗೆ ಯಾವುದೇ ಕ್ರಿಯೆ-ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.

ಆರು ಲಕ್ಷ ಸರ್ಕಾರಿ ನೌಕರರ ಪ್ರತಿನಿಧಿಯಾಗಿದ್ದೇನೆ. ನಾನು ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅವಶ್ಯಕತೆಯೂ ನನಗಿಲ್ಲ ಎಂದ ಅವರು, ನಾನು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಯಲ್ಲ. ಚುನಾವಣೆಗೂ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿದರು.

ನಾನು ಎನ್‌ಪಿಎಸ್ ವಿರೋಧಿಯಲ್ಲ. ಕೆಲವರು ಆ ರೀತಿ ಸುಳ್ಳು ಹಬ್ಬಿಸುತ್ತಿದ್ದಾರೆ. ಎನ್‌ಪಿಎಸ್ ಬದಲು ಒಪಿಎಸ್ ಜಾರಿಯಾಗಬೇಕೆಂದು ನಿರ್ಣಾಯಕ ಹೋರಾಟ ಮಾಡುತ್ತೇವೆ. ಅದಕ್ಕೂ ಮುನ್ನ ವೇತನ ಆಯೋಗ ಜಾರಿಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಮುಂಬರುವ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡುವ ಸಂಪೂರ್ಣ ವಿಶ್ವಾಸವಿದೆ. ಅದಾದ ಬಳಿಕ ಒಪಿಎಸ್ ಜಾರಿಗೆ ಹೋರಾಟ ಮಾಡಲಾಗುವುದು ಎಂದರು.