ದೊಡ್ಡಬಳ್ಳಾಪುರ : ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರ ಅಭಿವೃದ್ಧಿಗೆ ಪೂರಕವಾಗಿ ನಗರಸಭೆ ಅಧ್ಯಕ್ಷೆ ಸುಮಿತ್ರಾ 2025-26ನೇ ಸಾಲಿನಗೆ 75 ಕೋಟಿ ರೂ. ಗಾತ್ರದ ಪ್ರಥಮ ಬಜೆಟ್ ಮಂಡಿಸಿದರು.
ಆಡಳಿತಾರೂಢ ಬಿಜೆಪಿ-ಜೆಡಿಎಸ್ ಪಕ್ಷದ ಸದಸ್ಯರು ನಗರದ ಅಭಿವೃದ್ಧಿಗೆ ಸಹಕಾರಿ ಬಜೆಟ್ ಎಂದರೆ, ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ನಿರಾಶಾದಾಯಕ, ಆದಾಯ ವೃದ್ಧಿ ಇಲ್ಲದ, ನೇಕಾರರ ನಗರದಲ್ಲಿ ನೇಕಾರರ ಅಭಿವೃದ್ಧಿಗೆ ಶೂನ್ಯ ಕೊಡುಗೆಯ ಬಜೆಟ್ ಎಂದು ವಿಶ್ಲೇಷಿಸಿದರು.
ನೀರು ಮತ್ತು ಒಳಚರಂಡಿ:
ನಗರಸಭಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪೈಪ್‌ಲೈನ್ ಕಾಮಗಾರಿ, ಬೋರ್‌ವೆಲ್ ಹಾಗೂ ಇತರ ಕಾಮಗಾರಿಗಳಿಗಾಗಿ 1 ಕೊಟಿ 40 ಲಕ್ಷ ರೂ. ಮೀಸಲಿಡಲಾಗಿದೆ. ಒಳಚರಂಡಿ ವ್ಯವಸ್ಥೆಯ ಹೊರಗುತ್ತಿಗೆ ಮೇರೆಗೆ ನಿರ್ವಹಣೆಗಾಗಿ 45 ಲಕ್ಷ ರೂ.ಗಳನ್ನು ಹಾಗೂ ದುರಸ್ತಿಗಾಗಿ 25 ಲಕ್ಷ ರೂಪಾಯಿ ತೆಗೆದಿಡಲಾಗಿದೆ.
ಕ್ರೀಡಾ ಸೌಲಭ್ಯಕ್ಕಾಗಿ: ನಗರ ವ್ಯಾಪ್ತಿಯಲ್ಲಿ ವಾಸಿಸುವ ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಸಹಾಯಧನಕ್ಕಾಗಿ 5 ಲಕ್ಷ ರೂಪಾಯಿ ಅಂದಾಜಿಸಲಾಗಿದೆ. ದೊಡ್ಡಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಗಾಗಿ 45 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ದೊಡ್ಡಬಳ್ಳಾಪುರ ಉತ್ಸವ ಆಚರಣೆಗಾಗಿ 15 ಲಕ್ಷ ರೂ. ಅಂದಾಜಿಸಲಾಗಿದೆ.
ಯಾವುದಕ್ಕೆ ಎಷ್ಟು ಅನುದಾನ?
ನಗರದಲ್ಲಿ ವಿವಿಧ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ 4 ಕೋಟಿ 50 ಲಕ್ಷ ರೂ., ಬೀದಿ ದೀಪ ಅಳವಡಿಕೆಗಾಗಿ 25 ಲಕ್ಷ ರೂ., ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮರಾಗಳ ಅಳವಡಿಕೆಗಾಗಿ 40 ಲಕ್ಷ ರೂ., ಮಳೆನೀರು ಚರಂಡಿ, ಕಲ್ಬರ್ಟ್‌ಗಳ ಮತ್ತು ಕವರಿಂಗ್‌ಸ್ಲಾಬ್ ನಿರ್ಮಾಣಕ್ಕಾಗಿ 60 ಲಕ್ಷ ರೂ. ಸೇರಿ ಒಟ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 5.75 ಕೋಟಿ ಲಕ್ಷಗಳ ರೂಪಾಯಿ ಮೀಸಲಿರಿಸಲಾಗಿದೆ. ನೂತನ ಕೆ.ಆರ್. ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ 1 ಕೋಟಿ ರೂ., ನಗರಸಭಾ ಕಚೇರಿ ಆವರಣದಲ್ಲಿ ಶ್ರೀ ಕೊಂಗಾಡಿಯಪ್ಪ ಪುತ್ಥಳಿ ನಿರ್ಮಾಣಕ್ಕಾಗಿ 20 ಲಕ್ಷ ರೂ. ಮೀಸಲಿರಿಸಲಾಗಿದೆ. ನಗರಸಭಾ ಸ್ವತ್ತುಗಳ ಸಂರಕ್ಷಣೆಗಾಗಿ 50 ಲಕ್ಷ ರೂ. ಮೀಸಲಿಡಲಾಗಿದೆ.
ಜನಕಲ್ಯಾಣಕ್ಕೆ ಸಿಕ್ಕಿದ್ದೆಷ್ಟು?
ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ/ಪಂಗಡದವರ ಕಲ್ಯಾಣಕ್ಕಾಗಿ 55 ಲಕ್ಷ ರೂ., ಇನ್ನಿತರ ವರ್ಗದ ಬಡಜನಾಂಗದವರ ಅಭಿವೃದ್ಧಿಗಾಗಿ 16.50 ಲಕ್ಷ ರೂ., ಅಂಗವಿಕಲರ ಕಲ್ಯಾಣಕ್ಕಾಗಿ 11.50 ಲಕ್ಷ ರೂ. ಸೇರಿ ಒಟ್ಟಾರೆ ಜನ ಕಲ್ಯಾಣ ಕಾರ್ಯಕ್ರಮಗಳಿಗಾಗಿ 83 ಲಕ್ಷ ರೂಪಾಯಿ ಮೀಸಲಿರಿಸಲಾಗಿದೆ. ಪೌರಕಾರ್ಮಿಕರ ಮತ್ತು ನೀರು ಸರಬರಾಜು ಸಹಾಯಕರಿಗೆ ಬಿಸಿಯೂಟಕ್ಕಾಗಿ 27 ಲಕ್ಷ ರೂ., ದೊಡ್ಡಬಳ್ಳಾಪುರ ನಗರದಲ್ಲಿನ ಸ್ಮಶಾನಗಳ ಅಭಿವೃದ್ಧಿ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ 40 ಲಕ್ಷ ರೂ., ದೊಡ್ಡಬಳ್ಳಾಪುರದಲ್ಲಿ ಸುಸಜ್ಜಿತ ಚಿತಾಗಾರ ನಿರ್ಮಾಣಕ್ಕೆ 4 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
ವಿಶೇಷ ಕಾರ್ಯಕ್ರಮ
ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆ ಅಳವಡಿಸಿಕೊಳ್ಳುವವರ ಉತ್ತೇಜನಕ್ಕಾಗಿ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಯಿತು. ನಗರದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಆಧುನಿಕವಾಗಿ ವಿತರಣಾ ಪೈಪ್‌ಲೈನ್ ಮತ್ತು ಮೀಟರ್ ಅಳವಡಿಸಿರುವಂತೆ ಸುಮಾರು 10,000 ಸಂಖ್ಯೆಯ ಕುಡಿಯುವ ನೀರಿನ ನಳ ಸಂಪರ್ಕ ಒದಗಿಸಲು ಅಮೃತ 2.0 ಯೋಜನೆಯಡಿ 10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಯಿತು. ಅಮೃತ 2.0 ಯೋಜನೆಯಡಿ ನಗರದ ಜಲಮೂಲ ಅಭಿವೃದ್ಧಿಗಾಗಿ ನಗರವ್ಯಾಪ್ತಿಯ 5 ಕಲ್ಯಾಣಿಗಳ ಜೀರ್ಣೋದ್ಧಾರಕ್ಕಾಗಿ 8 ಕೋಟಿ ರೂ. ಹಾಗೂ 5 ಉದ್ಯಾನವನ ಅಭಿವೃದ್ಧಿಗಾಗಿ 2 ಕೋಟಿ ರೂ. ಯೋಜನೆ ನೀಡಿದ್ದು, ಸದರಿ ಉದ್ಯಾನವನಗಳಲ್ಲಿ ಕಿರುಅರಣ್ಯ ನಿರ್ಮಿಸಲು ಟ್ರೀ ಪಾರ್ಕ್ ಹಾಗೂ ಮಕ್ಕಳಿಗಾಗಿ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತಹ ಆಟಿಕೆ ಅಳವಡಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಇದೊಂದು ನಿರಾಶಾದಾಯಕ ಬಜೆಟ್, ರಸ್ತೆ ವಿಸ್ತರಣೆ, ನಗರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿಲ್ಲ. ಕೇವಲ ಕಣ್ಣೊರೆಸುವ ಬಜೆಟ್ ಆಗಿದೆ. -ಆನಂದ್, ಕಾಂಗ್ರೆಸ್ ಸದಸ್ಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ನೀಡಿದಂತಹ ಸಲಹೆಗಳನ್ನ ಸ್ವೀಕರಸಿಲ್ಲ. ನೂತನ ಯೋಜನೆಗಳಿಗೆ ಒತ್ತು ನೀಡದ ಬಜೆಟ್ ಆಗಿದೆ. -ಇಂದ್ರಾಣಿ, ಪಕ್ಷೇತರ ಸದಸ್ಯೆ ಈ ವರ್ಷ ಹೆಚ್ಚು ತೆರಿಗೆ ವಸೂಲಾತಿಗೆ ಕ್ರಮ ವಹಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಮುಂದಿನ ವರ್ಷ 100 ಕೋಟಿ ರೂ. ಬಜೆಟ್ ಮಂಡಿಸುವ ಗುರಿ ಹೊಂದಲಾಗಿದೆ. -ಮಲ್ಲೇಶ್, ನಗರಸಭೆ ಉಪಾಧ್ಯಕ್ಷ ಸರ್ಕಾರದಿಂದ ಬರುವ ಅನುದಾನಕ್ಕೆ ಅವಲಂಬಿತರಾಗಿ ಬಜೆಟ್ ಮಂಡಿಸಲಾಗಿದೆ. ಸ್ವಂತ ಆದಾಯ ಸೃಷ್ಟಿಗೆ ಒತ್ತು ನೀಡಿಲ್ಲ. ಯುಜಿಡಿ ಸಮಸ್ಯೆ ಬಗೆಹರಿಸಲು ಮತ್ತಷ್ಟು ಹಣ ಮೀಸಲಿಡಬೇಕಿತ್ತು. ರಸ್ತೆಗಳ ವಿಸ್ತರಣೆಗೆ ಮೀಸಲಿಟ್ಟಿರುವ ಅನುದಾನ ಸಾಲದು. ನೇಕಾರರಿಗೆ ಯಾವುದೇ ಘೋಷಣೆ ಇಲ್ಲ. -ಶಿವಶಂಕರ, ಕಾಂಗ್ರೆಸ್ ಸದಸ್ಯ ಕೂಲಂಕಷವಾಗಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಮಾಲೋಚನೆ ಮಾಡಿ ಬಜೆಟ್ ಮಂಡಿಸಲಾಗಿದೆ. ಕೆರೆ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅನುದಾನ ಬರುತ್ತಿದೆ. ಹೆಚ್ಚುವರಿಯಾಗಿ ನಗರದಲ್ಲಿ ಮೂರು ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ ಇದಕ್ಕೆ ಸಾರ್ವಜನಿಜನಿಕರ ಸಹಕಾರ ಅಗತ್ಯ. - ಕಾರ್ತಿಕ್ ಈಶ್ವರ್, ಪೌರಾಯುಕ್ತ, ನಗರಸಭೆ