ಜಿಲ್ಲೆ

ಮುಂದಿನ ಅಧಿವೇಶನದಲ್ಲಿ ಪರಿಷ್ಕೃತ ವರದಿ ಮಂಡಿಸಿ

Mysuru

ಮೈಸೂರು: ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಮಂಡಿಸಬೇಕು ಎಂದು ಒತ್ತಾಯಿಸಿ ‘ಕದಂಬ ಸೈನ್ಯ’ ಕನ್ನಡ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಸಹಿ ಚಳವಳಿ ನಡೆಯಿತು.

ಕನ್ನಡ ಮತ್ತು ಕನ್ನಡಿಗರ ಮೇಲೆ ಪರಭಾಷಿಕರಿಂದ ದಾಳಿ ನಡೆಯುತ್ತಿದೆ. ಕನ್ನಡಿಗರ ಉದ್ಯೋಗ ಕಸಿಯುವ ಪ್ರಯತ್ನ ನಡೆದಿದೆ. ಅಲ್ಲದೆ ರಾಜ್ಯ ಸರ್ಕಾರದ ಧೋರಣೆಯಿಂದ ಕನ್ನಡಿಗರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಉದ್ದಿಮೆದಾರರು ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗವನ್ನು ಬೇರೆಯವರಿಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಉದ್ಯೋಗ ಮೀಸಲಾತಿ ನೀಡುವಲ್ಲಿ ವಿಫಲವಾಗಿವೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ಜಾರಿ ಮಾಡಿದ್ದು, ಫೆ.17ರಂದು ನಡೆಯುವ ಅಧಿವೇಶನದಲ್ಲಿ ಪರಿಷ್ಕೃತ ವರದಿಯನ್ನು ಮಂಡಿಸುವ ಮೂಲಕ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸುಮಾರು 50ಕ್ಕೂ ಜನರಿಂದ ಸಹಿ ಸಂಗ್ರಹಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಯಿತು.
ಸಂಘದ ಮುಖಂಡರಾದ ಬೇಕ್ರಿ ರಮೇಶ್, ನಾಗೇಂದ್ರ, ವೆಂಕಟೇಶ್, ಮಹದೇವ ನಾಯಕ ಇತರರು ಹಾಜರಿದ್ದರು.