ಹುಬ್ಬಳ್ಳಿ : ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದಲ್ಲಿದ್ದವರಿಂದಲೇ ಷಡ್ಯಂತ್ರ ನಡೆದಿದ್ದು, ಕೂಡಲೇ ಅಧಿವೇಶನದಲ್ಲಿ ಮಧ್ಯಂತರ ವರದಿ ಮಡಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಿಂದುಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಬಹುಸಂಖ್ಯಾತ ಹಿಂದುಗಳ ಭಾವನೆ, ಧಾರ್ವಿುಕ ಅಸ್ಮಿತತೆಗೆ ವ್ಯವಸ್ಥಿತವಾಗಿ ಧಕ್ಕೆ ತರುವ ಕೆಲಸ ಮತ್ತು ಹಿಂದುಗಳ ಧಾರ್ವಿುಕ ಭಾವನೆ ಕಡಿಮೆ ಮಾಡುವ ಉದ್ದೇಶದಿಂದಲೇ ಎಸ್ಐಟಿ ತನಿಖೆ ನಡೆಸಲಾಗುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿ ಮತ್ತು ಎಡ ಪಂಥೀಯ ವಿಚಾರಧಾರೆ ವ್ಯಕ್ತಿಗಳಿಂದ ಇಂತಹ ಷಡ್ಯಂತ್ರ ನಡೆದಿದೆ. ಉದ್ದೇಶ ಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆಯೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಖುದ್ದಾಗಿ ಹೇಳಿದ್ದಾರೆ. ಹಾಗಾದರೆ, ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಇದೆಯೇ ಎಂದು ಪ್ರಶ್ನಿಸಿದ ಸಚಿವ ಜೋಶಿ, ಷಡ್ಯಂತ್ರದ ವಿಚಾರ ಉಪ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದೆ. ಹಾಗಾದರೆ, ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ಇಲ್ಲವೇ ? ಎಂದರು.
ಈ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅಸಹಾಯಕರಾಗಿದ್ದಾರೆ. ಸರ್ಕಾರದಲ್ಲಿ ಎಡ ಪಂಥೀಯ ವಿಚಾರಧಾರೆಯ ಪ್ರಮಾಣ ಹೆಚ್ಚಾಗಿದೆ ಎಂದರು.
ಮುಸುಕುಧಾರಿ ವ್ಯಕ್ತಿ ಸೂಚಿಸಿದ ಜಾಗದಲ್ಲಿ ಇದುವರೆಗೆ ಮೃತದೇಹದ ಯಾವುದೇ ಕುರುಹು ಸಿಕ್ಕಿಲ್ಲ. ಆತ ನೂರಾರು ಹೆಣ ಹೂತಿರುವುದಾಗಿ ಹೇಳುತ್ತಿದ್ದಾನೆ. ಹಾಗಿದ್ದರೆ ಅವನನ್ನು ಇಲ್ಲಿವರೆಗೆ ಏಕೆ ಬಂಧಿಸಿಲ್ಲ ? ತರಾತುರಿಯಲ್ಲಿ ಎಸ್ಐಟಿ ರಚನೆ ಮಾಡಿದ್ದು ಯಾಕೆ? ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬರ್ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ? ಎಂದು ಪ್ರಶ್ನಿಸಿದರು.
ಇದೇ ರೀತಿ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ವಿಚಾರದಲ್ಲಿ ಎಸ್ಐಟಿ ರಚನೆ ಏಕೆ ಮಾಡಲಿಲ್ಲ? ನಿಮ್ಮ ಸರ್ಕಾರದಲ್ಲಿ ಹಿಂದುಗಳ ಭಾವನೆಗಳಿಗೆ ಬೆಲೆಯೇ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಮತ ಬ್ಯಾಂಕ್ ರಾಜಕಾರಣಕ್ಕೆ ಇದೊಂದು ಉದಾಹರಣೆ. ಅನಾಮಿಕನ ಪೂರ್ವಾಪರದ ಬಗ್ಗೆ ತನಿಖೆ ನಡೆಸಬೇಕು. ಅಲ್ಲದೇ ಆತನ ಜಾತಿ, ಧರ್ಮ ವಿಚಾರಿಸಬೇಕು. ಆತ ಬೇರೆ ಧರ್ಮದವನಾಗಿದ್ದರೆ ಹಿಂದು ಧರ್ಮಕ್ಕೆ ಅನ್ಯಾಯ ಮಾಡಿದಂತಲ್ಲವೇ ? ಸರ್ಕಾರ ಹಿಂದುಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ರಾಜಣ್ಣ ರಾಜೀನಾಮೆಯಿಂದ ಕಾಂಗ್ರೆಸ್ನ ಡಬಲ್ ಸ್ಟಾ್ಯಂಡರ್ಡ್ ಬಹಿರಂಗಗೊಂಡಂತಾಗಿದೆ ಎಂದ ಸಚಿವ ಪ್ರಲ್ಹಾದ ಜೋಶಿ, ಮತಗಳ್ಳತನ ಬಗ್ಗೆ ಕಾಂಗ್ರೆಸ್ನವರು ಏಕೆ ದೂರು ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಬಾಲಿಶತನದ ವರ್ತನೆ ತೋರುತ್ತಿದ್ದಾರೆ. ವರುಣಾ, ಅಮೇಥಿಯಲ್ಲೂ ಮತಗಳು ಬ್ಲಾಕ್ ಆಗಿವೆ. ಕಾಂಗರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಸಲಹೆಗಾರರು ಅವರನ್ನು ಮೂರ್ಖರನ್ನಾಗಿ ಮಾಡಲು ಚಿಂತಿಸುತ್ತಿದ್ದಾರೋ ಗೊತ್ತಿಲ್ಲ. ಲಕ್ಷಾಂತರ ಮತಗಳನ್ನು ಕಳ್ಳತನ ಮಾಡಲು ಹೇಗೆ ಸಾಧ್ಯ ಎಂದರು.
ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಟ್ಟಿದ್ದೇ ನಾವು. ಗೋವಾ ಸರ್ಕಾರ ಕೋರ್ಟ್ನಲ್ಲಿ ದಾವೆ ಹೂಡಿದೆ. ಅದಕ್ಕೆ ನಾವು ಉತ್ತರ ಕೊಡುತ್ಥೇವೆ ಎಂದು ಜೋಶಿ ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮಹಾಪೌರರಾದ ಜ್ಯೋತಿ ಪಾಟೀಲ, ಉಪ ಮಹಾಪೌರ ತಿಪ್ಪಣ್ಣ ಮಜ್ಜಗಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.