ಯಳಂದೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.27ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ತೆರಳಲು ಯಳಂದೂರು ಸರ್ಕಾರಿ ನೌಕರರ ಸಂಘದ ಸದಸ್ಯರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಪಟ್ಟಣದ ತೋಟಗಾರಿಕಾ ಇಲಾಖೆಯ ಸರ್ಕಾರಿ ನೌಕರರನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಸೋಮವಾರ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ವೈ.ಎಂ.ಮಂಜುನಾಥ್, ಯಳಂದೂರು ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಒಟ್ಟು 610 ಸರ್ಕಾರಿ ನೌಕರರು ಇದ್ದು, ಸಮ್ಮೇಳನಕ್ಕೆ ತೆರಳಲು 250 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 4 ಬಸ್‌ಗಳು, 2 ಟಿಟಿಗಳು ಹಾಗೂ ಕೆಲವರು ಬಸ್ ಮತ್ತು ಕಾರುಗಳಲ್ಲಿ ಬರಲಿದ್ದಾರೆ.
ಈಗಾಗಲೇ ಸಮ್ಮೇಳನದ ಬಗ್ಗೆ ತಾಲೂಕಿನ ಪ್ರತಿ ಕಚೇರಿ, ಸರ್ಕಾರಿ ಶಾಲೆ, ಕಾಲೇಜುಗಳಿಗೆ ಕರಪತ್ರಗಳನ್ನು ಹಂಚಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಹಳೆ ಪಿಂಚಣಿ ಯೋಜನೆ ಮರು ಜಾರಿ, 7ನೇ ವೇತನ ಆಯೋಗದ ವರದಿಯ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆಯ ಲೋಕಾರ್ಪಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡಲಾಗಿದ್ದು, ಈ ಬಗ್ಗೆ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡುವ ಭರವಸೆ ಇದೆ ಎಂದರು.
ಸಂಘದ ಗೌರವಾಧ್ಯಕ್ಷ ಕೆ. ಸೋಮಣ್ಣ, ಸಂಘಟನಾ ಕಾರ್ಯದರ್ಶಿ ಸುರೇಶ್, ಆರೋಗ್ಯ ಇಲಾಖೆಯ ಸೈಯದ್ ಅಹಮ್ಮದ್, ತೋಟಗಾರಿಕಾ ಇಲಾಖೆಯ ಶಿವರಂಜನಿ, ವೀಣಾ ಸೇರಿದಂತೆ ಅನೇಕರು ಇದ್ದರು.