ಜಿಲ್ಲೆ

ಫಲಿತಾಂಶದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ

ಚನ್ನಮ್ಮ ಕಿತ್ತೂರು: ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಲಿತಾಂಶದಲ್ಲಿ ರೈತ ಸಹಕಾರಿ ಪ್ಯಾನಲ್ ವಿರುದ್ಧ ಷಡ್ಯಂತ್ರ ನಡೆಸಿ ಸೋಲಿಸಲಾಗಿದ್ದು, ಪ್ರಭಾವಿ ರಾಜಕಾರಣಿಗಳು ಹಾಗೂ ಅಕಾರಿಗಳ ಕೈವಾಡವಿದೆ. ಈ ಕುರಿತು ನ್ಯಾಯಾಲಯ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದೇವೆ ಎಂದು ಡಾ.ಬಸವರಾಜ ಪರವಣ್ಣವರ ಹೇಳಿದರು.

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ.ಬಸವರಾಜ ಪರವಣ್ಣವರ ಮಾತನಾಡಿದರು. ಪ್ರಕಾಶ ಮೂಗಬಸವ, ಶ್ರೀಕರ ಕುಲಕರ್ಣಿ, ಮಹಾಂತೇಶ ಅರಕುಣಿ ಇದ್ದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಹಾಗೂ ಪ್ರಕಾಶ ಮೂಗಬಸವ ಅವರಿಗೆ ರೈತರು ಚಲಾವಣೆ ಮಾಡಿದ ಮತದ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಮತದಾನದ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ಮತ ಎಣಿಕೆಯ ಪ್ರಕ್ರಿಯೆ ಆರಂಭಿಸಿದ್ದು, ಕೆಲವರ ಒಳಸಂಚಿಗೆ ಅಕಾರಿಗಳು ಕೈಜೋಡಿಸಿದ್ದಾರೆ. ಮರು ಎಣಿಕೆಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಈ ಹಿಂದೆ ಇದೇ ಸೋಮೇಶ್ವರ ಕಾರ್ಖಾನೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ ಮಲ್ಲೂರ ಚುನಾವಣೆ ಸಮೀಪಿಸುತ್ತಿದ್ದಂತೆ ಬೇರೆ ಕಡೆ ವರ್ಗಾವಣೆಯಾಗಿ ತಮ್ಮ ಮಗನನ್ನು ಈ ಚುನಾವಣೆಗೆ ನಿಲ್ಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಹರ್ಷಾ ಶುಗರ್ಸ್ ನೌಕರರು ಅಕ್ರಮವಾಗಿ ಭಾಗವಹಿಸಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಲಾಗಿದೆ ಎಂದರು.

ರಾಚಪ್ಪ ಮಟ್ಟಿ, ಮಹಾಂತೇಶ ಅರಕುಣಿ, ಬಸವರಾಜ ಬೋಳಗೌಡರ, ಗುರು ಮೆಟಗುಡ್ಡ, ಶ್ರೀಕರ ಕುಲಕರ್ಣಿ, ಸಂಗನಗೌಡ ರಾಮನಗೌಡ ಇತರರಿದ್ದರು.