ಅವಿನಾಶ್ ಜೈನಹಳ್ಳಿ ಮೈಸೂರು
ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೂ ಮುನ್ನವೇ ಯುವ ಸಮುದಾಯಕ್ಕೆ ಜೋಶ್ ನೀಡುವ ‘ಯುವ ಸಂಭ್ರಮ’ಕ್ಕೆ ಮತ್ತಷ್ಟು ರಂಗು ನೀಡಲು ಯುವ ಸಂಭ್ರಮ ಉಪ ಸಮಿತಿ ಮುಂದಾಗಿದೆ. ವಿದ್ಯಾಕಾಶಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.15ರಿಂದ 7 ದಿನಗಳ ಕಾಲ ಯುವ ಸಂಭ್ರಮ ಯುವ ಸಮುದಾಯದಲ್ಲಿ ರಂಗು ತುಂಬಲಿದೆ.
ಕರೊನಾದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೂ ಈ ಬಾರಿ ಜೀವಕಳೆ ಬಂದಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮವಾದ ‘ಯುವ ಸಂಭ್ರಮ’ವನ್ನು ಈ ಬಾರಿ ವಿಭಿನ್ನ ರೀತಿ ಆಯೋಜಿಸಲು ಉಪ ಸಮಿತಿ ಚಿಂತಿಸಿದೆ. ಯುವ ಸಂಭ್ರಮಕ್ಕೆ ಅಗತ್ಯ ತಯಾರಿ ನಡೆಯುತ್ತಿದ್ದರೆ, ಇತ್ತ ಸಂಭ್ರಮದಲ್ಲಿ ನೃತ್ಯ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಕೂಡ ಭರ್ಜರಿ ತಯಾರಿಗೆ ಮುಂದಾಗಿದ್ದಾರೆ.
ಸಕಲ ಸಿದ್ಧತೆ:
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಸಲು ಯುವ ಸಂಭ್ರಮ ಮತ್ತು ಯುವ ದಸರಾ ಉಪ ಸಮಿತಿ ಸಿದ್ಧತೆ ನಡೆಸಿದೆ. ಅದಕ್ಕಾಗಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಿಂದ ತಲಾ ಒಂದು ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಈಗಾಲೇ ಉಪ ಸಮಿತಿಯಿಂದ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗಿದ್ದು, ವಿಶ್ವವಿದ್ಯಾಲಯವೂ ತನ್ನ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೆ ಪ್ರತಿ ಪದವಿ ಕಾಲೇಜಿನಿಂದ ಒಂದೊಂದು ತಂಡ ಕಳಿಸುವಂತೆ ನಿರ್ದೇಶಿಸಿದೆ. ಈಗಾಗಲೇ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ತರಬೇತಿ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿರುವ ಸುಮಾರು 20 ವಿಶ್ವವಿದ್ಯಾಲಯಗಳ ತಂಡಗಳು ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಈ ಎಲ್ಲ ವಿಶ್ವವಿದ್ಯಾಲಯಗಳು ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳುಹಿಸಿಕೊಡಲಿವೆ.
15ರಂದು ಸಂಜೆ 6 ಗಂಟೆಗೆ ಚಾಲನೆ ಸಿಗಲಿದೆ. ಉದ್ಘಾಟಕರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಬಳಿಕ ವಿದ್ಯಾರ್ಥಿಗಳ ಕಾರ್ಯಕ್ರಮ ಆರಂಭವಾಗಲಿದೆ. ಪ್ರತಿದಿನ ಸಂಜೆ 6 ರಿಂದ 10 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿದಿನ ತಲಾ 20 ತಂಡಗಳು ಪ್ರದರ್ಶನ ನೀಡಲಿವೆ.
ಉತ್ತಮ ಪ್ರದರ್ಶನ ನೀಡುವ ತಂಡಗಳನ್ನು ಯುವ ದಸರಾಕ್ಕೆ ಆಯ್ಕೆ ಮಾಡಲಾಗುವುದು. ಪ್ರತಿದಿನ 2 ಅಥವಾ 3ರಂತೆ ಆಯ್ಕೆಯಾಗುವ ಎಲ್ಲ ತಂಡಗಳು ಯುವ ದಸರಾದಲ್ಲಿ ಪ್ರದರ್ಶನ ನೀಡಲಿವೆ.
ಹೊಸ ಥೀಮ್: ಸ್ವಾತಂತ್ರೃದ ಅಮೃತ ಮಹೋತ್ಸವ, ಜಾನಪದ ಕಲೆ, ಸ್ವಚ್ಛ ಭಾರತ, ಮಾದರಿ ಮೈಸೂರು ನಿರ್ಮಾಣಕ್ಕೆ ಮೈಸೂರು ಅರಸರ ಕೊಡುಗೆ ಸೇರಿದಂತೆ ಹಲವು ಥೀಮ್‌ಗಳನ್ನು ಈ ಬಾರಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ.
27ರಿಂದ ಯುವ ದಸರಾ: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಲಾಗುತ್ತಿದೆ. ಈ ಕಲಾವಿದರ ಜತೆಗೆ ಯುವ ಸಂಭ್ರಮದಲ್ಲಿ ಆಯ್ಕೆಯಾದ 14 ಉತ್ತಮ ತಂಡಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ನೀಡಲಾಗಿದೆ.
ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೂ ಮುನ್ನವೇ ನಡೆಯುವ ‘ಯುವ ಸಂಭ್ರಮ’ ಯುವ ಸಮುದಾಯಕ್ಕೆ ಜೋಶ್ ನೀಡಲಿದೆ. ಆದ್ದರಿಂದ ಈ ಬಾರಿಯ ಯುವ ಸಂಭ್ರಮಕ್ಕೆ ಮತ್ತಷ್ಟು ರಂಗು ನೀಡಲಾಗುತ್ತದೆ. ಈ ಸಂಬಂಧ ಎಲ್ಲ ರೀತಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಯುವ ಸಂಭ್ರಮದಲ್ಲಿ ಮೈಸೂರು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ತಂಡ ಹಾಗೂ ಇತರ ವಿವಿಗಳ ತಲಾ ಒಂದು ತಂಡಗಳು ಭಾಗಿಯಾಗಲಿವೆ. ಉತ್ತಮ ಪ್ರದರ್ಶನ ನೀಡುವ ತಂಡಗಳನ್ನು ಯುವ ದಸರಾಕ್ಕೆ ಆಯ್ಕೆ ಮಾಡಲಾಗುತ್ತದೆ.ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಿಶೇಷಾಧಿಕಾರಿ ಯುವ ಸಂಭ್ರಮ, ಯುವ ದಸರಾ ಉಪಸಮಿತಿ