ಸಾಂದರ್ಭಿಕ ಚಿತ್ರ 
ಜಿಲ್ಲೆ

ಗಜಪಡೆ ಆತಿಥ್ಯಕ್ಕೆ ಸಿದ್ಧತೆ

ಅವಿನಾಶ್ ಜೈನಹಳ್ಳಿ ಮೈಸೂರು
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಮತ್ತು ಅವರ ಕುಟುಂಬದವರಿಗೆ ಭರ್ಜರಿ ಆತಿಥ್ಯ ನೀಡಲು ಅರಣ್ಯ ಇಲಾಖೆ ಮತ್ತು ಅರಮನೆ ಮಂಡಳಿ ಮುಂದಾಗಿವೆ.

ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಯ ವಾಸ್ತವ್ಯಕ್ಕಾಗಿ ಅರಮನೆ ಅಂಗಳದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೆಡ್ ನಿರ್ಮಾಣ ಸಂಬಂಧ ಅರಣ್ಯ ಇಲಾಖೆ ವತಿಯಿಂದ ಟೆಂಡರ್ ಕರೆಯಲಾಗಿದ್ದು, ಈ ವಾರದಲ್ಲಿ ಪ್ರಕ್ರಿಯೆ ಮುಕ್ತಾಗೊಂಡು, ಮುಂದಿನ ವಾರ ಶೆಡ್ ನಿರ್ಮಾಣ ಕಾರ್ಯ ಶುರುವಾಗಲಿದೆ.

ಆನೆಗಳು, ಮಾವುತರು ಹಾಗೂ ಕಾವಾಡಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ 40ಕ್ಕೂ ಹೆಚ್ಚು ಶೆಡ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ 2020 ಮತ್ತು 2021ರಲ್ಲಿ ಸರಳವಾಗಿ ದಸರಾ ಆಚರಿಸಲಾಗಿತ್ತು. ಉತ್ಸವವನ್ನು ಅರಮನೆ ಆವರಣಕ್ಕೆ ಸೀಮಿತ ಮಾಡಲಾಗಿತ್ತು. ಜಂಬೂಸವಾರಿಯೂ ಅರಮನೆ ಅಂಗಳದಲ್ಲೇ ಜರುಗಿತ್ತು. ಹೀಗಾಗಿ, ಮಾವುತರು ಮತ್ತು ಕಾವಾಡಿಗಳಷ್ಟೇ ದಸರೆಯಲ್ಲಿ ಭಾಗಿಯಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕರೆತಂದಿರಲಿಲ್ಲ. ಆದರೆ, 2022ರಲ್ಲಿ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆ ವೇಳೆ ಮಾವುತರು ಮತ್ತು ಕಾವಾಡಿಗಳ ಜತೆಗೆ, ಅವರ ಕುಟುಂಬದವರೂ ಭಾಗಿಯಾಗಿದ್ದರು. ಈ ಬಾರಿ ದಸರಾ ಮಹೋತ್ಸವವನ್ನು ಇನ್ನೂ ಅದ್ದೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಮತ್ತು ಅವರ ಕುಟುಂಬ ಸದಸ್ಯರು ಎಂದಿನಂತೆ ಉತ್ಸವದ ಭಾಗವಾಗಲಿದ್ದಾರೆ.


ಮಾವುತರು ಮತ್ತು ಕಾವಾಡಿಗಳಿಗೆ ಶೆಡ್‌ಗಳನ್ನು ನಿರ್ಮಿಸುವ ಹಾಗೂ ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಪರಿಶೀಲನೆ ಮಾಡಿದ್ದಾರೆ. ಈ ಹಿಂದಿನಂತೆಯೇ ಅರಮನೆ ಅಂಗಳದಲ್ಲಿರುವ ಕಾಯಂ ಕಾಂಕ್ರೀಟ್ ಪ್ಲಾಟ್‌ಾರ್ಮ್ ಮೇಲೆ ಶೆಡ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ಇನ್ನಿತರ ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲು ತೀರ್ಮಾನಿಸಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಕೆಗೆ ಚಿಂತನೆ

ಗಜಪಡೆ ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ದಸರಾ ಆನೆಗಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಪುಂಡಾಟಿಕೆ ನಡೆಸುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಆನೆಗಳು ಬೀಡು ಬಿಡುವ ಸ್ಥಳದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳಿಗೆ ಆಹಾರ ತಯಾರಿಸುವ ಸ್ಥಳ ಸೇರಿದಂತೆ ಆಯ್ದ ಜಾಗಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಲು ತೀರ್ಮಾನಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಇದ್ದರೂ ಪ್ರವಾಸಿಗರು ಫೋಟೊ, ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಲು ಕ್ಯಾಮರಾ ಅಳವಡಿಕೆ ನೆರವಾಗುತ್ತದೆ. ಸಾರ್ವಜನಿಕರಿಂದ ದಸರಾ ಆನೆಗಳಿಗೆ ಉಂಟಾಗುತ್ತಿದ್ದ ಸಮಸ್ಯೆಗೂ ಮುಕ್ತಿ ಸಿಗಲಿದೆ.

150 ಜನ ಆಗಮಿಸುವ ನಿರೀಕ್ಷೆ


ಈ ಬಾರಿ 14 ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇದರೊಂದಿಗೆ, ತಲಾ 14 ಮಾವುತರು ಮತ್ತು ಕಾವಾಡಿಗಳು, 6 ವಿಶೇಷ ಮಾವುತರು ಹಾಗೂ 6 ಅಡುಗೆ ಸಹಾಯಕರು ಮತ್ತು ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ. ಒಟ್ಟಾರೆ 40 ಕುಟುಂಬಗಳಿಂದ 150ಕ್ಕೂ ಹೆಚ್ಚು ಜನರು ಆನೆಗಳ ಜತೆ ದಸರಾ ಉತ್ಸವಕ್ಕೆ ಆಗಮಿಸಲಿದ್ದಾರೆ.

ಮಕ್ಕಳಿಗೆ ಟೆಂಟ್ ಶಾಲೆ


ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ ಕುಟುಂಬದ 50ಕ್ಕೂ ಹೆಚ್ಚು ಮಕ್ಕಳು ದಸರೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಕ್ಕಳಿಗಾಗಿ ಅರಮನೆ ಅಂಗಳದಲ್ಲಿ ಟೆಂಟ್ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ, ಗ್ರಂಥಾಲಯ ಹಾಗೂ ಆಯುರ್ವೇದ ಚಿಕಿತ್ಸಾಲಯವನ್ನೂ ಸ್ಥಾಪಿಸಲು ತೀರ್ಮಾನಿಸಲಾಗಿದೆ.


ವೀರನಹೊಸಹಳ್ಳಿಯಲ್ಲೂ ಸಿದ್ಧತೆ


ಸೆ. 1ರಂದು ಗಜಪಯಣ ನಡೆಯಲಿದೆ. ಅದಕ್ಕಾಗಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ವೇದಿಕೆ ಇನ್ನಿತರ ಸಿದ್ಧತಾ ಕಾರ್ಯಗಳು ಮುಂದಿನ ವಾರ ಆರಂಭವಾಗಲಿವೆ. ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸಲಿವೆ. ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ಪಾರ್ಥಸಾರಥಿ, ವಿಜಯಾ, ವರಲಕ್ಷ್ಮೀ ಆನೆಗಳು ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ. ಈ ಆನೆಗಳು ವೀರನಹೊಸಹಳ್ಳಿಯಿಂದ ನೇರವಾಗಿ ನಗರದ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿವೆ. ಅಲ್ಲಿಂದ ಸೆ. 4ರಂದು ಅರಮನೆ ಆವರಣ ಪ್ರವೇಶಿಸಲಿವೆ.

ದಸರಾ ಉತ್ಸವದಲ್ಲಿ ಭಾಗಿಯಾಗುವ ಮಾವುತರು, ಕಾವಾಡಿಗಳು ಮತ್ತವರ ಕುಟುಂಬಗಳ ವಾಸ್ತವ್ಯಕ್ಕಾಗಿ ಅರಮನೆ ಅಂಗಳದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಶೆಡ್ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮುಂದಿನ ವಾರ ಶೆಡ್ ನಿರ್ಮಾಣ ಕೆಲಸ ಆರಂಭವಾಗಲಿದೆ.ಸೌರಭ್‌ಕುಮಾರ್ಡಿಸಿಎಫ್