ಹಾಸನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ನೀಡಲಾಗುವ ಮಾರ್ಗಸೂಚಿ, ಆದೇಶ, ನಿರ್ದೇಶನದನ್ವಯ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಸೂಚಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿದರು.
ಜಿಯೋ ಟ್ಯಾಗ್ ಮಾಡಿ, ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದರು. ಗಣತಿದಾರರು ಮತ್ತು ಮೇಲ್ವಿಚಾರಕರ ಮಾಹಿತಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಹಾಗೂ ಆಯಾ ತಾಲೂಕಿನ ತಹಸೀಲ್ದಾರ್ ಅವರಿಗೆ ನೀಡಲು ಮತ್ತು ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ಸ್ ತರಬೇತಿಗೆ ನಿಯೋಜನೆ ಮಾಡಲು ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಜಿಲ್ಲೆಯ ಎಲ್ಲ ಬಿಇಒಗಳಿಗೆ ಸೂಚಿಸಿದರು.
ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ಸ್‌ಗಳಿಂದ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಲು ಕ್ರಮವಹಿಸುವಂತೆ ಜಿಲ್ಲೆಯ ಎಲ್ಲ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಬಿಇಒ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು. ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಸ್‌ಗಳಿಂದ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸೆ.12 ರಿಂದ 19 ರೊಳಗೆ ಯಾವುದಾದರೂ 2 ದಿನಗಳಲ್ಲಿ ತರಬೇತಿ ನೀಡಲು ಕ್ರಮವಹಿಸುವಂತೆ ತಿಳಿಸಿದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಸೆ.22 ರಿಂದ ಅಕ್ಟೋಬರ್ 7 ರವರೆಗೆ ನಡೆಸಲು ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಬಿಇಒ ಮತ್ತು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು.
ವಿದ್ಯುತ್ ಸಂಪರ್ಕವಿಲ್ಲದಿರುವ ಹಾಗೂ ನೆಟ್ವರ್ಕ್ ಇಲ್ಲದಿರುವ ಹಾಡಿ, ಗುಡಿಸಲು, ಶ್ಯಾಡೋ ಮನೆಗಳು, ಅಲೆಮಾರಿ/ಅರೆ ಜನಾಂಗದವರ ಅಲೆಮಾರಿ ಜನಾಂಗದವರ ಟೆಂಟ್‌ಗಳು ಇತ್ಯಾದಿಗಳನ್ನು ಗುರುತಿಸಿ ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿಗಳಿಗೆ ವರದಿ ನೀಡಬೇಕು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂಬಂಧ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ಸಮೀಕ್ಷೆ ಕಾರ್ಯ ಮುಗಿಯುವವರೆಗೂ ಪತ್ರಿಕಾ ಪ್ರಕಟಣೆ ನೀಡಬೇಕು. ನಿಗದಿ ಪಡಿಸಿರುವ ಕಾಲಮಿತಿಯೊಳಗೆ ಸಂಬಂಧಿಸಿದ ತಾಲೂಕು ಮಟ್ಟದ ಸಮನ್ವಯ ಸಮಿತಿಯ ಸದಸ್ಯರು ಅಧಿಕಾರಿಗಳಿಂದ ತಮ್ಮ ವ್ಯಾಪ್ತಿಗೆ ಬರುವ ವಿಭಾಗ ಮಟ್ಟ, ತಾಲೂಕು ಮಟ್ಟದ ಮಾಹಿತಿಯನ್ನು ಪಡೆದು ಅದನ್ನು ದೃಢೀಕರಿಸಿ ಪ್ರತಿ ದಿನ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ವರದಿ ನೀಡಲು ಹಾಸನ ಸಕಲೇಶಪುರ ಉಪ ವಿಭಾಗಾಧಿಕಾರಿಗಳು ಕ್ರಮವಹಿಸಲು ಸೂಚಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇ-ಕೆ.ವೈ.ಸಿ.(ಆಧಾರ್) ಕಡ್ಡಾಯವಾಗಿರುತ್ತದೆ. 6 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಲಭ್ಯವಿಲ್ಲದಿದ್ದಲ್ಲಿ, ಎನ್ರೋಲ್‌ಮೆಂಟ್ ನಂಬರ್ ಮಾಹಿತಿಯನ್ನು ಪಡೆದು ಹಾಗೂ 6 ವರ್ಷದ ನಂತರದ ವಯಸ್ಸಿನ ಕುಟುಂಬದ ಪ್ರತಿ ಸದಸ್ಯರ ಮಾಹಿತಿಯನ್ನು ಆಧಾರ್ ಸಂಖ್ಯೆ ಪಡೆದು ಸಮೀಕ್ಷೆ ಮಾಡಲು ಗಣತಿದಾರರುಗಳಿಗೆ ಮಾಹಿತಿ ನೀಡಲು ಅಧಿಕಾರಿಗಳು ಕ್ರಮವಹಿಸಲು ತಿಳಿಸಿದರು.