ಜಿಲ್ಲೆ

ಎಕ್ಸ್​ಪ್ರೆಸ್ ವೇ ಅನುಷ್ಠಾನಕ್ಕೆ ಸಿದ್ಧತೆ: ಬೆಂಗಳೂರು- ಚೆನ್ನೈ ಮಧ್ಯೆ ಹೆದ್ದಾರಿ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಗಿರೀಶ್ ಗರಗ ಬೆಂಗಳೂರು

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮಾರ್ಗ ಕ್ರಮಿಸುವ ಅವಧಿ ಕಡಿತಗೊಳಿಸಲು ರೂಪಿಸಲಾಗಿರುವ ಬೆಂಗಳೂರು- ಚೆನ್ನೈ ಎಕ್ಸ್​ಪ್ರೆಸ್ ವೇ ನಿರ್ವಣಕ್ಕೆ ಗುತ್ತಿಗೆದಾರರ ನೇಮಕಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಮುಂದಾಗಿದೆ.

ದೇಶಾದ್ಯಂತ 3.3 ಲಕ್ಷ ಕೋಟಿ ರೂ. ವೆಚ್ಚದ 22 ಎಕ್ಸ್​ಪ್ರೆಸ್ ವೇ ಹೆದ್ದಾರಿ ನಿರ್ವಣಕ್ಕೆ ಎನ್​ಎಚ್​ಎಐ ನಿರ್ಧರಿಸಿದೆ. ಅದರಲ್ಲಿ 271 ಕಿ.ಮೀ. ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್ ವೇ ಯೋಜನೆಯೂ ಸೇರಿದೆ. ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ವಾಹನಗಳಿಗಿಂತ, ಚೆನ್ನೈ ಬಂದರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ಎಕ್ಸ್​ಪ್ರೆಸ್ ವೇ ಅನುಕೂಲವಾಗಲಿದೆ. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇದೀಗ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಎನ್​ಎಚ್​ಎಐ ರೂಪಿಸಿರುವ ಯೋಜನೆಯಂತೆ ಎಕ್ಸ್​ಪ್ರೆಸ್ ವೇ ಕಾಮಗಾರಿಯನ್ನು ಪ್ಯಾಕೇಜ್ ಲೆಕ್ಕದಲ್ಲಿ ನೀಡಲಾಗುತ್ತಿದೆ. ಮೊದಲಿಗೆ ಬೆಂಗಳೂರಿನಿಂದ ಮಾಲೂರುವರೆಗೆ ರಸ್ತೆ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದೆ. ಮಾಲೂರು ಬಳಿ ರಾಷ್ಟ್ರೀಯ ಹೆದ್ದಾರಿ 4 ಮತ್ತು 207ರ ನಡುವೆ ಇಂಟರ್​ಚೇಂಜ್ ಮಾರ್ಗ ನಿರ್ವಿುಸಬೇಕಿದೆ. ಒಟ್ಟು 27.10 ಕಿ.ಮೀ. ಉದ್ದದ ಮಾರ್ಗಕ್ಕೆ 942.86 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಅದೇ ರೀತಿ ಎಕ್ಸ್​ಪ್ರೆಸ್ ವೇ ಸಾಗುವ ಆಂಧ್ರಪ್ರದೇಶದಲ್ಲಿನ ಗುಡಿಪಾಲದಿಂದ ವಲಜಪೇಟ್​ವರೆಗೆ ಮಾರ್ಗ ನಿರ್ವಣಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಒಟ್ಟು 24 ಕಿ.ಮೀ. ಮಾರ್ಗಕ್ಕೆ 931.85 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಬಿಒಟಿ ಮಾದರಿ: ನೂತನ ಎಕ್ಸ್​ಪ್ರೆಸ್ ವೇ ನಿರ್ವಹಣೆಯನ್ನು ಸುಲಭವಾಗಿಸಲು ಪ್ಯಾಕೇಜ್ ಲೆಕ್ಕದಲ್ಲಿ ಗುತ್ತಿಗೆ ನೀಡಲಾಗುತ್ತಿದೆ. ಅದರಂತೆ ಗುತ್ತಿಗೆ ಸಂಸ್ಥೆ ತನಗೆ ನೀಡುವ ಉದ್ದದಷ್ಟು ರಸ್ತೆಯನ್ನು ನಿರ್ವಿುಸಿ, ಅವುಗಳ ನಿರ್ವಹಣೆ ಮಾಡಬೇಕಿದೆ. ಅಲ್ಲದೆ, ಎಕ್ಸ್​ಪ್ರೆಸ್ ವೇ ಅಕ್ಕಪಕ್ಕದಲ್ಲಿ ಹೋಟೆಲ್, ಪೆಟ್ರೋಲ್ ಬಂಕ್ ಸೇರಿ ಇನ್ನಿತರ ಅಗತ್ಯ ಸೌಲಭ್ಯ ಅನುಷ್ಠಾನಗೊಳಿಸಬೇಕಿದೆ.

ಕೈಗಾರಿಕಾ ಅಭಿವೃದ್ಧಿಗೆ ಯೋಜನೆ ಅನುಕೂಲ

ಯೋಜನೆ ಜಾರಿಯಿಂದಾಗಿ ಬೆಂಗಳೂರು-ಚೆನ್ನೈ ಮಾರ್ಗದಲ್ಲಿನ ಕೈಗಾರಿಕೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಚೆನ್ನೈ ಬಂದರಿನಿಂದ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಛಾ ವಸ್ತುಗಳು, ಹಾಗೂ ಚೆನ್ನೈ ಬಂದರಿಗೆ ಕೈಗಾರಿಕಾ ಉತ್ಪನ್ನಗಳು ಸುಲಭವಾಗಿ ಸಾಗಿಸಲು ಎಕ್ಸ್​ಪ್ರೆಸ್ ವೇ ಸಹಕಾರಿಯಾಗಲಿದೆ.

2,600 ಹೆಕ್ಟೇರ್ ಭೂಮಿ ಸ್ವಾಧೀನ ಅಗತ್ಯ

ಎಕ್ಸ್​ಪ್ರೆಸ್ ವೇ ನಿರ್ವಣಕ್ಕೆ ಒಟ್ಟು 2,600 ಹೆಕ್ಟೇರ್ ಭೂಮಿ ಅವಶ್ಯಕತೆಯಿದೆ. ಕರ್ನಾಟಕದಲ್ಲಿ 800 ಹೆಕ್ಟೇರ್, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 900 ಹೆಕ್ಟೇರ್ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಈ ಹಿಂದೆಯೇ ಚಾಲನೆ ನೀಡಲಾಗಿದೆ.

4 ಗಂಟೆಯಲ್ಲಿ ಚೆನ್ನೈಗೆ

ಯೋಜನೆಯಂತೆ ಬೆಂಗಳೂರು ಹೊರವಲಯದಿಂದ ಆರಂಭವಾಗುವ ಹೆದ್ದಾರಿ ಚೆನ್ನೈ ಹೊರವರ್ತಲ ರಸ್ತೆ ಸಂರ್ಪಸುವ ಶ್ರೀಪೆರಂಬದೂರಿನಲ್ಲಿ ಅಂತ್ಯವಾಗಲಿದೆ. ಆಂಧ್ರಪದೇಶದ ವೆಂಕಟಗಿರಿಕೋಟ, ಪಲ್ಮನೇರ್​ನಲ್ಲೂ ಹಾದುಹೋಗಲಿದೆ. ಯೋಜನೆ ಜಾರಿಯಿಂದಾಗಿ ಬೆಂಗಳೂರು-ಚೆನ್ನೈ ನಡುವಿನ ಮಾರ್ಗವನ್ನು 4 ಗಂಟೆಯಲ್ಲಿ ಕ್ರಮಿಸಬಹುದು ಎಂದು ಅಂದಾಜಿಸಲಾಗಿದೆ. ಎನ್​ಎಚ್​ಎಐ ಯೋಜನೆಯನ್ನು 2025ಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದೆ.

2011ರ ಯೋಜನೆ

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳನ್ನು ಹಾದು ಹೋಗುವ 271 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ ಯೋಜನೆಯನ್ನು 2011ರಲ್ಲಿಯೇ ರೂಪಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದಕ್ಕೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಒಟ್ಟು 8 ಪಥದ ನೆಲಮಟ್ಟದ ರಸ್ತೆ ನಿರ್ವಣ, ಅಗತ್ಯವಿರುವೆಡೆ 6 ಪಥದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಯೋಜನೆಗೆ 18 ಸಾವಿರ ಕೋಟಿ ರೂ.ಗೂ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ.