ಜಿಲ್ಲೆ

ಕರೊನಾ ಸೋಂಕು ಎದುರಿಸಲು ಸನ್ನದ್ಧ: ಆರೋಗ್ಯ ಇಲಾಖೆಯಲ್ಲಿ ತುರ್ತು ಸಭೆ

ಮಂಡ್ಯ: ರಾಜ್ಯದಲ್ಲಿ ಕರೊನಾ ಸೋಂಕು ಉಲ್ಭಣಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಮಾತ್ರವಲ್ಲದೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಮುಖ್ಯಸ್ಥರೊಂದಿಗೂ ಚರ್ಚೆ ನಡೆಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯಸರ್ಕಾರ ಆದೇಶಿಸಿದೆ. ಅದರಂತೆ ಜಿಲ್ಲೆಯಲ್ಲಿ ಕ್ರಮ ವಹಿಸಲಾಗುತ್ತಿದೆ. ಚಿಕಿತ್ಸೆಗೆ ಬೇಕಾದ ಔಷಧ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದಲ್ಲದೆ ಕರೊನಾ ಸೋಂಕಿಗೆ ಸಂಬಂಧಿಸಿದಂತೆ ಪ್ರತಿ ವಾರವೂ ಸಭೆ ನಡೆಯಲಿದೆ.

ಸಧ್ಯಕ್ಕೆ ತಾಲೂಕು ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಪ್ಲಾಂಟ್‌ಗಳಲ್ಲಿ ಸಮಸ್ಯೆ ಇದ್ದರೆ ತುರ್ತಾಗಿ ಸರಿಪಡಿಸಿಕೊಳ್ಳಬೇಕು. ಜಂಬೋ ಸಿಲಿಂಡರ್‌ಗಳನ್ನು ತುಂಬಿಸಿಕೊಳ್ಳಬೇಕು. ಪ್ರತಿ ತಾಲೂಕಿಗೆ 10 ಹಾಸಿಗೆಯನ್ನು ಕರೊನಾ ಸೋಂಕಿತರಿಗೆಂದು ಮೀಸಲಿಡುವಂತೆ ತಿಳಿಸಲಾಗಿದೆ. ಅಂತೆಯೇ ಪಿಪಿಟಿ ಕಿಟ್, ಕೋವಿಡ್ ಸೋಂಕಿತರಿಗೆ ನೀಡುವ ಮಾತ್ರೆ, ಮಾಸ್ಕ್‌ಗಳನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಮಿಮ್ಸ್‌ನಲ್ಲಿ 40 ಹಾಸಿಗೆಯನ್ನು ಮೀಸಲಿಡಲಾಗಿದೆ. ಇದರ ಜತೆಗೆ 20 ಐಸಿಯು ಇರಲಿದೆ.

ಗಂಟಲ ದ್ರವ ಸಂಗ್ರಹ

ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕೋವಿಡ್ ಪರೀಕ್ಷೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಧ್ಯಕ್ಕೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 100 ಜನರ ಗಂಟಲ ದ್ರವ ಸಂಗ್ರಹ ಮಾಡಬಹುದು. ಇದಲ್ಲದೆ ಜಿಲ್ಲೆಯಲ್ಲಿ 1000 ಜನರ ಗಂಟಲ ದ್ರವ ಸಂಗ್ರಹಿಸುವ ಕಿಟ್ ಇದೆ. ಮಿಮ್ಸ್‌ನಲ್ಲಿ 2 ಸಾವಿರ ಸಂಗ್ರಹವಿದೆ. ಎಲ್ಲಿಯೇ ಗಂಟಲ ದ್ರವ ಸಂಗ್ರಹಿಸಿದರೂ ಕೋವಿಡ್ ಟೆಸ್ಟ್ ಮಾಡಲು ಮೈಸೂರಿಗೆ ರವಾನಿಸಬೇಕಿದೆ. ಕೋವಿಡ್ ಸೋಂಕಿನ ಗುಣಲಕ್ಷಣ ಕಂಡುಬಂದರೆ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಕೋವಿಡ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಮಿಮ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಲಾಗಿದೆ. ಗರ್ಭಿಣಿಯರು, ಮಧುಮೇಹಿಗಳು, ವೃದ್ಧರು, ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಡಾ.ಕೆ.ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿ