ಸುನಿಲ್ ಪೊನ್ನೇಟಿ ಮಡಿಕೇರಿ:
ಬಿರುಬಿಸಿಲಿನ ತಾಪಕ್ಕೆ ಅರಣ್ಯಗಳು ಒಣಗುತ್ತಿದ್ದು, ಕಾಳ್ಗಿಚ್ಚು ಹರಡಲು ಸೂಕ್ತ ವಾತಾವರಣ ನಿರ್ಮಾಣ ಆದಂತಿದೆ. ಬೇಸಿಗೆಯ ಮಳೆ ಕೂಡ ಬಾರದ ಕಾರಣ ಕಾಡಿನೊಳಗೆ ಅಪಾಯಕಾರಿ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಾಳ್ಗಿಚ್ಚಿನ ವಿರುದ್ಧ ಹೋರಾಟಕ್ಕೆ ಅರಣ್ಯ ಇಲಾಖೆ ಸರ್ವಸನ್ನದ್ಧವಾಗಿದ್ದು, ಅಗ್ನಿಶಾಮಕ ದಳದ ಜತೆಯಲ್ಲೂ ನಿಕಟ ಸಂಪರ್ಕ ಇಟ್ಟುಕೊಳ್ಳಲಾಗಿದೆ.
ಅರಣ್ಯದೊಳಗೆ ಈಗ ಮರಗಳ ಎಲೆ ಉದುರಿ ಒಣಗಿ ತರಗಲೆಗಳಂತಾಗಿದ್ದು ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲೂ ಕಾಳ್ಗಿಚ್ಚಿನ ಆತಂಕ ಕಾಣಿಸಿಕೊಂಡಿದೆ. ಬುಧವಾರವಷ್ಟೇ (ಫೆ.೨೮) ಯಡವನಾಡು ಅರಣ್ಯದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದ ಸುಮಾರು ೩೫ ಎಕರೆಯಷ್ಟು ಅರಣ್ಯ ನಾಶವಾಗಿದೆ. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಕುಶಾಲನಗರ ಸಮೀಪದಲ್ಲಿ ಸಿಗುವ ಆನೆಕಾಡು ಅರಣ್ಯ ಪ್ರದೇಶ, ನಾಗರಹೊಳೆ ವನ್ಯ ಜೀವಿ ವಲಯ ಹಾಗೂ ಪುಷ್ಪಗಿರಿ ವನ್ಯ ಜೀವಿ ವಲಯ ಕಾಳ್ಗಿಚ್ಚು ವಿಷಯದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ.
ಬಹುತೇಕ ಮಾನವ ಹಸ್ತಕ್ಷೇಪದಿಂದಲೇ ಪ್ರತಿವರ್ಷವೂ ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣಗಳು ವರದಿಯಾಗುತ್ತಿದೆ. ಯಡವನಾಡು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳಲು ದುಷ್ಕರ್ಮಿಗಳ ಕೈವಾಡವೇ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನದ ಹಿಂದೆಯೇ ಆ ಭಾಗದಲ್ಲಿ ಬೆಂಕಿ ಹಚ್ಚಿರುವುದು ಕಂಡು ಬಂದಿತ್ತು. ಇಲಾಖೆ ಸಿಬ್ಬಂದಿ ಅದನ್ನು ನಂದಿಸಿದ್ದರು. ಆದರೆ ಬುಧವಾರ ೫-೬ ಕಡೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಗಾಳಿ ಹೆಚ್ಚು ಇದ್ದ ಕಾರಣ ಕೂಡಲೇ ನಿಯಂತ್ರಿಸಲು ಸಾಧ್ಯವಾಗದೇ ಹೆಚ್ಚು ಪ್ರದೇಶಕ್ಕೆ ಹರಡಿದೆ. ಈ ಸಂಬಂಧ ಈಗಾಗಲೇ ಎಫ್‌ಐಆರ್ ಕೂಡ ದಾಖಲಾಗಿದೆ. ಕೆಲವರ ಮೇಲೆ ಸಂಶಯ ವ್ಯಕ್ತವಾಗಿದ್ದು ಶೀಘ್ರ ಅವರ ಬಂಧನವೂ ಆಗಲಿದೆ.
ಕೊಡಗಿನಲ್ಲಿ ಒಟ್ಟು ಶೇ. ೭೯.೫೬ ಪ್ರದೇಶಗಳಷ್ಟು ಅಂದರೆ ಸುಮಾರು ೩,೨೬೩.೩೮ ಚ.ಕಿ.ಮೀ. ಅರಣ್ಯ ಪ್ರದೇಶ ಇದೆ. ಪ್ರತಿ ವರ್ಷವೂ ಕಾಣಿಸಿಕೊಳ್ಳುವ ಕಾಳ್ಗಿಚ್ಚಿನಿಂದ ವನ್ಯ ಸಂಪತ್ತು ನಾಶವಾಗುತ್ತಿರುವ ಆತಂಕಕಾರಿ ಬೆಳವಣಿಗೆ ಮಧ್ಯೆ ಆಕಸ್ಮಿಕ ಅಥವಾ ಮಾನವ ಹಸ್ತಕ್ಷೇಪದಿಂದ ಸಂಭವಿಸುವ ಬೆಂಕಿ ಅನಾಹುತಗಳಿಂದ ಅರಣ್ಯವನ್ನು ಕಾಪಾಡಿಕೊಳ್ಳುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.
ಪ್ರಕೃತಿ ಸಹಜ ಪ್ರಕ್ರಿಯೆಯಂತೆ ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಮರಗಳಿಂದ ಎಲೆ ಉದುರಿ ನೆಲಕ್ಕೆ ಬಿದ್ದು ಒಣಗಿ ನಿಂತಿವೆ. ಅರಣ್ಯ ಇಲಾಖೆಯ ನೆಡು ತೋಪುಗಳಂತೂ ಸಂಪೂರ್ಣ ಬೋಳುಬೋಳಾಗಿ ಕಾಣುತ್ತಿವೆ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆಯೇ ಕುರುಚಲು ಕಾಡು ಕೂಡ ಒಣಗುತ್ತಿವೆ. ಸಾಮಾನ್ಯಾಗಿ ಜನವರಿ ಅಂತ್ಯ, ಫೆಬ್ರವರಿ ಮೊದಲ ವಾರದಲ್ಲಿ ಕಿಡಿ ಬಿದ್ದರೆ ಸಾಕು ಬೆಂಕಿ ಹತ್ತಿಕೊಂಡುಬಿಡುತ್ತದೆ ಎನ್ನುವ ಸ್ಥಿತಿಗೆ ಬಹುತೇಕ ಅರಣ್ಯಗಳು ತಲುಪಿರುತ್ತವೆ. ಈಗ ಮಾರ್ಚ್ ತಿಂಗಳು ಕಾಲಿಟ್ಟಿದ್ದು ಮಳೆಯೂ ಬಾರದಿರುವುದರಿಂದ ಬೆಟ್ಟಗಳ ತುತ್ತತುದಿಯ ಒಣಗಿದ ಹುಲ್ಲುಗಾವಲು, ನೆಡುತೋಪಿನಲ್ಲಿ ಬಿದ್ದಿರುವ ತೇಗದ ಮರದ ಒಣಗಿದ ಎಲೆ, ಬಿದಿರು ಮೆಳೆಗಳು ಅರಣ್ಯದ ಪಾಲಿಗೆ ಮರಣ ಮೃದಂಗ ಭಾರಿಸುತ್ತಿರುವಂತೆ ಕಂಡುಬರುತ್ತಿದೆ.
ರಾಷ್ಟ್ರೀಯ ಹೆದ್ದಾರಿ ೨೭೫ ಸೀಳಿಕೊಂಡು ಹೋಗುವ ಆನೆಕಾಡು ಮೀಸಲು ಅರಣ್ಯದಲ್ಲಿ ಪ್ರತಿ ವರ್ಷವೂ ಕಾಳ್ಗಿಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಮಾರ್ಗದಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದಲೇ ಅರಣ್ಯಕ್ಕೆ ಬೆಂಕಿ ಬೀಳುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಇಲ್ಲಿ ಅರಣ್ಯ ಪ್ರದೇಶದ ಮಧ್ಯೆ ತಂಪಾದ ವಾತಾವರಣ ಇರುತ್ತದೆ ಎನ್ನುವ ಕಾರಣಕ್ಕೆ ಪ್ರಯಾಣಿಕರು ಇಲ್ಲಿಯೇ ವಾಹನ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳುವುದು, ಅಡುಗೆ ಮಾಡುವುದು, ಧೂಮಪಾನ-ಮದ್ಯಪಾನ ಮಾಡುವುದು, ಮೂತ್ರ ವಿಸರ್ಜನೆಗೆ ವಾಹನಗಳನ್ನು ನಿಲ್ಲಿಸುವುದರಿಂದ ಇದೊಂದು ಅಪಾಯಕಾರಿ ಪ್ರದೇಶವಾಗಿದೆ.
ನಾಗರಹೊಳೆ ವನ್ಯಜೀವಿನ ವಲಯದ ರಸ್ತೆಯಂಚಿನ ಅರಣ್ಯ ಪ್ರದೇಶ, ಪುಷ್ಪಗಿರಿ ವನ್ಯಜೀವಿ ವಲಯದ ಬೆಟ್ಟಗಳಲ್ಲಿನ ಹುಲ್ಲುಗಾವಲು ಪ್ರದೇಶ ಕೂಡ ಕಾಳ್ಗಿಚ್ಚು ಹೆಚ್ಚು ಕಾಣಿಸಿಕೊಳ್ಳುವ ಜಾಗಗಳಾಗಿವೆ.
ಬಿರು ಬಿಸಿಲಿನಲ್ಲಿ ಮರಕ್ಕೆ ಮರ ಉಜ್ಜಿ ಕಿಡಿ ಹತ್ತಿಕೊಳ್ಳುವುದರಿಂದ, ಪ್ರವಾಸ, ಟ್ರಕ್ಕಿಂಗ್ ಹೋದವರು ಹಚ್ಚುವ ಕ್ಯಾಂಪ್ ಫೈರ್‌ನಿಂದ, ಹುಲ್ಲು ಸಮೃದ್ಧವಾಗಿ ಬೆಳೆಯಲಿ ಎನ್ನುವ ಕಾರಣಕ್ಕೆ ಬೆಂಕಿ ಹಚ್ಚುವುದರಿಂದ, ಉರಿಯುತ್ತಿರುವ ಬೀಡಿ, ಸಿಗರೇಟ್ ಅರಣ್ಯದಲ್ಲಿ ಎಸೆಯುವುದರಿಂದ, ಅರಣ್ಯ ಇಲಾಖೆ ಮೇಲಿನ ದ್ವೇಷದಿಂದ ಬೆಂಕಿ ಹಚ್ಚುವುದರಿಂದ, ಅವೈಜ್ಞಾನಿಕವಾಗಿ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸುವುದರಿಂದ,ಅರಣ್ಯದೊಳಗೆ ಹಾದು ಹೋಗಿರುವ ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್‌ಗಳಿಂದ ಹೆಚ್ಚಾಗಿ ಕಾಳ್ಗಿಚ್ಚು ಉಂಟಾಗುತ್ತದೆ.
ಅರಣ್ಯ ಇಲಾಖೆಯೂ ಬೇಸಿಗೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ. ಅಮೂಲ್ಯ ಅರಣ್ಯ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಸಂಭಾವ್ಯ ಕಾಳ್ಗಿಚ್ಚು ವಿರುದ್ಧ ಅರಣ್ಯದ ಅಂಚಿನಲ್ಲಿ ಅಗ್ನಿರೇಖೆಗಳನ್ನು (ಫೈರ್ ಲೈನ್) ನಿರ್ಮಿಸಲಾಗಿದೆ. ಹಾಲಿ ಇರುವ ಅಗ್ನಿರೇಖೆಗಳನ್ನು ದುರಸ್ತಿಪಡಿಸಲಾಗಿದೆ. ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ ಸಂಭಾವ್ಯ ಆಕಸ್ಮಿಕ ಸಂಭವಿಸುವ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಅಗತ್ಯ ಉಪಕರಣಗಳನ್ನೂ ಸಿದ್ಧ ಮಾಡಿ ಇಟ್ಟುಕೊಳ್ಳಲಾಗಿದೆ. ಈ ಬಾರಿ ಒಂದಿಷ್ಟು ಆಧುನಿಕ ಉಪಕರಣಗಳನ್ನೂ ಅರಣ್ಯ ಇಲಾಖೆ ಖರೀದಿ ಮಾಡಿದೆ.
ಅಗ್ನಿಶಾಮಕ ಇಲಾಖೆಯವರನ್ನು ಕರೆಯಿಸಿ ಅವರಿಂದ ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯತಂತ್ರದ ತರಬೇತಿಯನ್ನೂ ನೀಡಲಾಗಿದೆ. ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಕಾಳ್ಗಿಚ್ಚು ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅರಣ್ಯಪ್ರದೇಶಗಳಲ್ಲಿ ನೀರಿನ ಸಂಗ್ರಹದೊಂದಿಗೆ ವಾಹನಗಳನ್ನು ಸಜ್ಜುಗೊಳಿಸಿ ನಿಲ್ಲಿಸಲಾಗಿದ್ದು, ಸಿಬ್ಬಂದಿ ಕೂಡ ಸನ್ನದ್ಧ ಸ್ಥಿತಿಯಲ್ಲಿ ಇದ್ದಾರೆ. ಆರ್‌ಆರ್‌ಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಡಿಸೆಂಬರ್‌ನಲ್ಲೇ ಫೈರ್ ಲೈನ್ ಮಾಡಿಕೊಳ್ಳಲಾಗಿದೆ. ಜನವರಿಯಿಂದ ಬೆಂಕಿ ಕಾವಲುಗಾರರನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸುವ ಬಗ್ಗೆ ಅಗ್ನಿಶಾಮಕ ಇಲಾಖೆ ಜತೆ ಸೇರಿಕೊಂಡು ನಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸಲಾಗಿದೆ. ಅಗ್ನಿ ಶಾಮಕ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಫೈರ್ ಬ್ಲೋಯರ್ಸ್, ಮಿಸ್ಟ್ ಬ್ಲೋಯರ್ಸ್, ಅಗ್ನಿ ನಿರೋಧಕ ಜಾಕೆಟ್, ಪ್ರಥಮ ಚಿಕಿತ್ಸೆ ಕಿಟ್ ಎಲ್ಲಾ ಸಿಬ್ಬಂದಿಗೂ ಒದಗಿಸಲಾಗಿದೆ. ಅಗ್ನಿ ಶಾಮಕ ದಳದ ಜತೆಗೂ ಸಮನ್ವಯತೆ ಇಟ್ಟುಕೊಳ್ಳಲಾಗಿದೆ. ಫೈರ್ ವಾಚರ್ಸ್ ಮಾತ್ರವಲ್ಲದೇ ಸಂದರ್ಭಕ್ಕೆ ಅನುಗುಣವಾಗಿ ಆರ್‌ಆರ್‌ಟಿ ಮತ್ತು ಇಟಿಎಫ್ ಸಿಬ್ಬಂದಿ ಬಳಸಿಕೊಳ್ಳಲಾಗುವುದು.
ಭಾಸ್ಕರ್, ಡಿಸಿಎಫ್, ಮಡಿಕೇರಿ ಅರಣ್ಯ ವಿಭಾಗ