ಉಪ್ಪಿನಂಗಡಿ ನೆರೆ ಪೀಡಿತ ಪ್ರದೇಶಕ್ಕೆ ಶುಕ್ರವಾರ ಡಿಸಿ ಮುಲ್ಲೈ ಮುಗಿಲನ್ ಭೇಟಿ ನೀಡಿದರು. ಜಿಪಂ ಸಿಇಒ ಡಾ.ಕೆ.ಆನಂದ್,ಎಸ್‌ಪಿ ಯತೀಶ್ ಮೊದಲಾದವರಿದ್ದರು  
ಜಿಲ್ಲೆ

ನೆರೆ ಪರಿಸ್ಥಿತಿ ಎದುರಿಸಲು ಸನ್ನದ್ಧ :ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ

ಇಂದಿರಾ ಎನ್ ಕೆ

ಉಪ್ಪಿನಂಗಡಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಉಪ್ಪಿನಂಗಡಿ ಸಹಿತ ನೆರೆ ಬಾಧಿಸಬಹುದಾದ ಎಲ್ಲೆಡೆ ನಿಗಾ ಇರಿಸಲಾಗಿದೆ. ಸಂಭಾವ್ಯ ಸಮಸ್ಯೆಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ದಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳ ಉಪ್ಪಿನಂಗಡಿಗೆ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು.ನೇತ್ರಾವತಿ ನದಿಯಲ್ಲಿ ರಾತ್ರಿ ವೇಳೆ ನೀರಿನ ಪ್ರವಾಹ ಹೆಚ್ಚಾಗಿ ನೆರೆ ಸಂಭವಿಸಿದರೆ ಸ್ಥಳಾಂತರಗೊಳ್ಳಬಹುದಾದ ಮನೆಗಳ ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮೊದಲೇ ಬೇರೆಡೆ ಸ್ಥಳಾಂತರಿಸಲು ಮನವೊಲಿಸಿ ಎಂದರು. ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೆರೆ ಸಂಭವಿಸಿದ ಸಮಯದಲ್ಲಿ ವಿದ್ಯುತ್ ಸರಬರಾಜನ್ನು ತಡೆ ಹಿಡಿಯಲಾಗುತ್ತಿದ್ದು, ಜನತೆ ಇದಕ್ಕೆ ಸಹಕರಿಸಬೇಕೆಂದು ವಿನಂತಿಸಿದರು.

ಸತತ ಸೂಚನೆಯ ಹೊರತಾಗಿಯೂ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಸ್ಥಳೀಯರ ದೂರಿಗೆ ಸ್ಪಂದಿಸಿದ ಅವರು, ಅರಣ್ಯ ಇಲಾಖಾಧಿಕಾರಿಗಳಿಗೆ ನಾಳೆಯೊಳಗಾಗಿ ಮರಗಳ ತೆರವಿನ ದಾಖಲೆಯೊಂದಿಗೆ ವರದಿ ನೀಡಲು ತಾಕೀತು ಮಾಡಿದರು. ಜಿಪಂ ಸಿಇಒ ಡಾ.ಕೆ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮೊದಲಾದವರಿದ್ದರು.