ಜಿಲ್ಲೆ

ಕಾಫಿ ಮಂಡಳಿಯಿಂದ 2500 ಕೋಟಿ ರೂ. ಬಜೆಟ್ ಸಿದ್ಧ: ಬೋಜೇಗೌಡ

ಚಿಕ್ಕಮಗಳೂರು: ಕಾಫಿ ಉದ್ಯಮದ ವಿವಿಧ ಚಟುವಟಿಕೆಗೆ ಪೂರಕವಾಗಿ 2020-21ನೇ ಸಾಲಿಗೆ 2500 ಕೋಟಿ ರೂ.ಗಳ ಬಜೆಟ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿದೆ ಎಂದು ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬೆಳೆಗಾರರಿಗೆ ಒದಗಿಸುವ ಶೇ.90ರಷ್ಟು ಸಹಾಯಧನದಲ್ಲಿ ನೀರಾವರಿ, ಸ್ಪ್ರಿಂಕ್ಲರ್, ತೆರೆದ ಬಾವಿ, ಪಲ್ಪಿಂಗ್ ಯಂತ್ರ, ಕಾಫಿ ಕಣ ನಿರ್ಮಾಣ, ಮತ್ತಿತರ ಚಟುವಟಿಕೆ, ಸಾಮಾನ್ಯ ವರ್ಗದ ಬೆಳೆಗಾರರಿಗೆ ಶೇ. 50ರ ಸಹಾಯಧನದ ಜತೆಗೆ ಗುಣಮಟ್ಟ ವರ್ಧಿಸುವ ಯೋಜನೆಗೆ ಧನವಿನಿಯೋಗಿಸಲು ಈ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಒಟ್ಟು ದೇಶದಲ್ಲಿ ಕಾಫಿ ಬೆಳೆಯುವ 4,54,722 ಹೆಕ್ಟೇರ್ ಪ್ರದೇಶವಿದ್ದು, ಇದರಲ್ಲಿ ರಾಜ್ಯದ ಪಾಲು ಶೇ. 70 ರಷ್ಟಿದೆ. ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ 2,44,785 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕಾಫಿ ಬೆಳೆಯಲಾಗುತ್ತಿದೆ ಎಂದರು.

ಎನ್‍ಡಿಆರ್‍ಎಫ್ ನಿಂದ ಪರಿಹಾರ: 

ಕಳೆದ ನಾಲ್ಕು ವರ್ಷಗಳಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣಕ್ಕೆ ಕಾಫಿ ಉದ್ಯಮ ನಷ್ಟ ಅನುಭವಿಸುತ್ತಲೇ ಬಂದಿದ್ದು, ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ನಿಂದ ಸೂಕ್ತ ಪರಿಹಾರ ಒದಗಿಸಲಾಗಿದೆ. 2018-19ರಲ್ಲಿ 28076 ಬೆಳೆಗಾರರಿಗೆ 40 ಕೋಟಿ ರೂ., 2019-20ರಲ್ಲಿ ಎನ್‍ಡಿಆರ್‍ಎಫ್ ನಿಂದ 52730 ಬೆಳೆಗಾರರಿಗೆ 156 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 2020-21ರಲ್ಲಿ ಡಿಸೆಂಬರ್ ಗಿಂತ ಮುಂಚೆ ಸಂಭವಿಸಿದ ಅತೀವೃಷ್ಟಿ ಹಾನಿಗೆ 37 ಕೋಟಿ ರೂ. ಹಾಗೂ ಈಚೆಗೆ ಆದ ನಷ್ಟಕ್ಕೆ ಸಂಬಂಧಿಸಿದಂತೆ ಇದುವರೆಗೆ 17327 ಬೆಳೆಗಾರರಿಗೆ 25.89 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕ್‍ಗಳಿಗೆ ಮೆದು ಧೋರಣೆಗೆ ಸಲಹೆ:

ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬೆಳೆಗಾರರು ಬ್ಯಾಂಕ್ ಸಾಲ ಮರುಪಾವತಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಬಾರಿ ಬೆಳೆಗಾರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಕಾಫಿ ಮಂಡಳಿ ಸಹ ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ಸೇರಿ ಅತೀವೃಷ್ಟಿಯಿಂದಾದ ಬೆಳೆಹಾನಿ ಮತ್ತಿತರ ನಷ್ಟದ ಕುರಿತು ಚರ್ಚಿಸಲಾಗಿದೆ. ಪಶ್ಚಿಮಘಟ್ಟ ಪ್ರದೇಶವನ್ನು ಈಗಾಗಲೇ ಪ್ರಕೃತಿ ವಿಕೋಪ ಪ್ರದೇಶ ಎಂದು ಸರ್ಕಾರ ಘೋಷಿಸಿದ್ದು, ಬ್ಯಾಂಕ್‍ಗಳು ಸಾಲ ವಸೂಲಾತಿ ವಿಚಾರದಲ್ಲಿ ಮೆದು ಧೋರಣೆ ಅನುಸರಿಸಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಬೆಳೆಗಾರರು ಅಸಲು, ಬಡ್ಡಿ ಕೂಡ ಪಾವತಿಸಲು ಸಾಧ್ಯವಾಗದ ಸ್ಥಿತಿಯ ಬಗ್ಗೆ ಕಾಫಿ ಮಂಡಳಿ ಹಾಗೂ ಎಸ್‍ಎಲ್‍ಬಿಸಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಲ್ಲಿ ಸಹ ಮೆದು ಧೋರಣೆ ಅನುಸರಿಸುವ ಬಗ್ಗೆ ಬ್ಯಾಂಕ್‍ಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗಿದ್ದು, ಕಳೆದ ಐದು ವರ್ಷಗಳಿಂದ ಬೆಳೆಸಾಲ ಪಾವತಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಂತು ಪಾವತಿ ಮುಂದೂಡಿ ಬಡ್ಡಿ ಮನ್ನಾ ಮಾಡಬೇಕೆಂದು ಕೋರಲಾಗಿದೆ ಎಂದು ತಿಳಿಸಿದರು.

ಸಾಲ ವಸೂಲಾತಿ ಮುಂದೂಡಲು ಮನವಿ: 

ಕೇಂದ್ರದ ಆರ್ಥಿಕ ಮತ್ತು ವಾಣಿಜ್ಯ ಸಚಿವಾಲಯಕ್ಕೆ ಮಂಡಳಿ ಪತ್ರ ಬರೆದಿದ್ದು ಬೆಳೆಸಾಲದ ಮೇಲಿನ ಇದುವರೆಗಿನ ಬಡ್ಡಿ ಸಂಪೂರ್ಣ ಮನ್ನಾ ಮಾಡಬೇಕಲ್ಲದೆ, ಮುಂದೆ ಶೇ.3ರ ಬಡ್ಡಿ ಮಾತ್ರ ವಿಧಿಸಬೇಕು. ಎರಡು ವರ್ಷದ ಸಾಲ ವಸೂಲಾತಿಗೆ ರಿಯಾಯ್ತಿ ನೀಡಬೇಕು. ಸಾಲ ಪಾವತಿಗೆ ಮುಂದಿನ 7 ವರ್ಷ ಅವಕಾಶ ನೀಡಬೇಕು. ಹೊಸದಾಗಿ ನೀಡುವ ಸಾಲವನ್ನು ಶೇ.3ರ ಸರಳ ಬಡ್ಡಿದರದಲ್ಲಿ ಒದಗಿಸಬೇಕೆಂದು ಕೋರಲಾಗಿದೆ ಎಂದು ಹೇಳಿದರು.

ಪ್ರಕೃತಿ ಮುನಿಸಿಕೊಂಡ ಕಾರಣ ಕಳೆದ 5 ವರ್ಷಗಳಿಂದ ಬೆಳೆಗಾರರು ತೊಂದರೆಗೆ ಒಳಗಾಗಿದ್ದಾರೆ. ಬೆಳೆಗಾರರು ಈ ಕೃಷಿಯನ್ನು ಕೈಬಿಡುವುದೇ ಸೂಕ್ತ ಎನ್ನುವ ಸ್ಥಿತಿಯಲ್ಲಿದ್ದಾರೆ. ಬೆಳೆಗಾರರ ಸಂಕಷ್ಟದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಪ್ರತಿನಿತ್ಯ ಕಾರ್ಮಿಕರಿಂದಲೇ ನಡೆಯುವ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಶೇ.70 ರಿಂದ 80ರಷ್ಟು ಕಾರ್ಮಿಕರಿಗೆ ನಿತ್ಯ ವೇತನ ಪಾವತಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೆರವು ನೀಡಬೇಕೆಂದು ಮಂಡಳಿಯಿಂದ ಮನವಿ ಮಾಡಲಾಗಿದೆ ಎಂದು ಹೇಳಿದರು.

10 ಎಚ್‍ಪಿವರೆಗೆ ಉಚಿತ ವಿದ್ಯುತ್:

ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಿಗೆ ಅನುಕೂಲವಾಗುವಂತೆ 10 ಎಚ್.ಪಿ. ಸಾಮರ್ಥ್ಯದವರೆಗಿನ ಮೋಟಾರು ಪಂಪ್‍ಸೆಟ್‍ಗಳಿಗೆ ಉಚಿತವಾಗಿ ವಿದ್ಯುತ್ ನೀಡಬೇಕೆಂಬ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದು, ಶಾಸನ ಸಭೆಯಲ್ಲಿ ಸಹ ಒಪ್ಪಿಗೆ ದೊರೆತಿದೆ. ಹಣಕಾಸು ಇಲಾಖೆಯಿಂದ ಆದೇಶ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ವರಸಿದ್ಧಿ ವೇಣುಗೋಪಾಲ್, ಸಿ.ಎಚ್.ಲೋಕೇಶ್, ಬಿ.ರಾಜಪ್ಪ, ಕಾಫಿ ಬೆಳೆಗಾರ ಶ್ರೀಕಾಂತ್‍ಪೈ, ಕಾಫಿ ಮಂಡಳಿ ಉಪ ನಿರ್ದೇಶಕ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು.