ಜಿಲ್ಲೆ

ಸ್ಥಳೀಯ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿ

ಪ್ರಸಿನ್ ಕೆ.ಆರ್

ಹನೂರು: ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈಗಿನಿಂದಲೇ ಪಕ್ಷದ ಸಂಘಟನೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಹೇಳಿದರು.

ಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಮುಖ್ಯಮಂಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜನತೆ ಇದರ ಅನುಕೂಲ ಪಡೆಯುತ್ತಿದ್ದು, ಜನಮನ್ನಣೆಗಳಿಸಿದೆ. ಆದರೆ, ಇದನ್ನು ಸಹಿಸದ ಬಿಜೆಪಿಯವರು ರಾಜ್ಯದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ತಿಳಿದಿದೆ. ಆದ್ದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಹೆಚ್ಚು ಗೆಲ್ಲಬೇಕಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ತಳಮಟ್ಟದಿಂದಲೇ ಪಕ್ಷ ಸಂಘಟಿಸಬೇಕಿದ್ದು, ಈಗಿನಿಂದಲೇ ಕಾರ್ಯೋನ್ಮುಖರಾಗಬೇಕಿದೆ. ಈ ಸಂಬಂಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿಲಂದರ್ ಧರ್ಮಸೇನಾ ಅವರಿಗೆ ಕ್ಷೇತ್ರದ ಉಸ್ತುವಾರಿಯನ್ನು ನೀಡಲಾಗಿದ್ದು, ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ಅಮಿತ್ ಶಾ ಹೇಳಿಕೆ ಖಂಡನೀಯ: ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆಯನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದೆ. ಈ ಬಗ್ಗೆ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷದಿಂದಲೂ ವಿರೋಧ ವ್ಯಕ್ತವಾಗಿದೆ. ಈ ಒಂದು ನಿರ್ಧಾರ ಸ್ವಾಯತ್ತತೆಯನ್ನು ಕಿತ್ತುಕೊಂಡಂತೆ ಆಗುತ್ತದೆ. ಸಂವಿಧಾನ ನಿರ್ಮಾತೃ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನಿಸಿದಂತಾಗುತ್ತದೆ. ಈ ಬಗ್ಗೆ ಅಮಿತ್ ಶಾ ಅವರು ಎಲ್ಲಾ ವಿಚಾರಕ್ಕೂ ಅಂಬೇಡ್ಕರ್ ಅವರ ಹೆಸರನ್ನು ತರಬೇಡಿ ಎಂದು ಕೇವಲವಾಗಿ ಮಾತನಾಡಿರುವುದು ನಿಜಕ್ಕೂ ಖಂಡನೀಯ. ಅಂಬೇಡ್ಕರ್ ಅವರನ್ನು ದೇಶದ ಎಲ್ಲರೂ ಗೌರವಿಸುತ್ತಾರೆ. ಆದರೆ, ಅಮಿತ್ ಶಾ ಅವರು ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಅವರನ್ನು ಗೆಲ್ಲಿಸಬೇಕು: ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆದ ಕಾಡ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಹನೂರು ಕಾಂಗ್ರೆಸ್ ಭದ್ರಕೋಟೆ. ಆದರೆ ಕಳೆದ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಕೆಲವು ಕಾರಣಾಂತರದಿಂದ ಭದ್ರಕೋಟೆಯನ್ನು ಕಳೆದುಕೊಂಡಾಯಿತು. ಆದ್ದರಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಬೇಕು. ಜತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಬೇಕು ಎಂದರು.

ಇದೇ ವೇಳೆ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ರಚನೆ ಸಂಬಂಧ ಚರ್ಚಿಸಲಾಯಿತು. ಎಸ್ಟಿ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ನಾಗರಾಜು ಅವರಿಗೆ ಕಾರ್ಯಾದೇಶದ ಪ್ರತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿ ಬಿಲಂದರ್ ಧರ್ಮಸೇನಾ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ, ಪಪಂ ಸದಸ್ಯರಾದ ಗಿರೀಶ್, ಸುದೇಶ್, ಸಂಪತ್‌ಕುಮಾರ್, ಪಿಎಸಿಸಿ ಅಧ್ಯಕ್ಷ ನಟರಾಜು, ಮುಖಂಡ ನಾಗೇಂದ್ರ, ಮಂಗಲ ಪುಟ್ಟರಾಜು ಇತರರು ಇದ್ದರು.