ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷೆ ಮಮ್ತಾಜ್‌ಬಾನು ಅಧ್ಯಕ್ಷತೆಯಲ್ಲಿ ವಿಶೇಷ ಹಾಗೂ ಬಜೆಟ್ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಮಹೇಶ್‌ಕುಮಾರ್, ಆನಂದ್‌ಕುಮಾರ್ ಹಾಗೂ ಸದಸ್ಯರು ಇದ್ದರು. 
ಜಿಲ್ಲೆ

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆ ಸಿದ್ಧತೆ ಕೈಗೊಳ್ಳಿ

ಹನೂರು: ಸರ್ವಧರ್ಮ ಸಮನ್ವಯತೆ ಸಾರುವ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಭಾನುವಾರದೊಳಗೆ ಮೂಲಸೌಕರ್ಯ ಒದಗಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಅಧ್ಯಕ್ಷೆ ಮಮ್ತಾಜ್‌ಬಾನು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಪ್ರಮುಖವಾಗಿ ಈ ಒತ್ತಾಯ ಕೇಳಿ ಬಂತು.

ಸದಸ್ಯರು ಮಾತನಾಡಿ, ಮಾ.24 ರಿಂದ 4 ದಿನಗಳ ಕಾಲ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆ ನಡೆಯಲಿದ್ದು, ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಜಾತ್ರೆಯು ಒಂದು ವಾರ ಇರುವಾಗಲೇ ಪೂರ್ವಭಾವಿ ಸಭೆ ಕರೆದು ಸೌಕರ್ಯ ಸಂಬಂಧ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಇಂತಹ ಕಾರ್ಯ ನಡೆದಿಲ್ಲ. ಆದ್ದರಿಂದ ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಕುಡಿಯುವ ನೀರು, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಬೀದಿದೀಪ ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸುವ ಸಂಬಂಧ ಅಗತ್ಯ ಸಿಬ್ಬಂದಿ ನಿಯೋಜಿಸಿ ಭಾನುವಾರದೊಳಗೆ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಭಕ್ತರಿಗೆ ತೊಂದರೆಯಾಗಬಾರದು. ಜತೆಗೆ ಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿ ಸುಸೂತ್ರ ಜಾತ್ರೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಅವರಿಗೆ ಸೂಚಿಸಿದರು. ಅಗತ್ಯ ಕ್ರಮ ಕೈಗೊಳ್ಳಲಾವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಇದೇ ವೇಳೆ ಪಪಂ ವತಿಯಿಂದ ನಿರ್ಮಿಸಿರುವ ಅವಧಿ ಮುಗಿದಿರುವ ಮಳಿಗೆಗಳನ್ನು ಟೆಂಡರ್ ಕರೆದು ಬಾಡಿಗೆಗೆ ನೀಡಬೇಕು. ಒಪ್ಪಂದ ಮಾಡಿಕೊಳ್ಳದೆ ಅಂಗಡಿ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸುದೇಶ್ ಮಾತನಾಡಿ, ಇದೀಗ ಬೇಸಿಗೆ ಆರಂಭವಾಗಿದೆ. ಆದರೆ ಪಟ್ಟಣದಲ್ಲಿನ 3 ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಮುನ್ನ ಘಟಕಗಳನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಆಸ್ತಿ ತೆರಿಗೆ, ಕುಡಿಯುವ ನೀರಿನ ಶುಲ್ಕ, ವ್ಯಾಪಾರ ಪರವಾನಗಿ ಶುಲ್ಕ ಪರಿಷ್ಕರಣೆ, ಖಾಸಗಿ ಬಸ್ ನಿಲ್ದಾಣದ ಸುಂಕ ವಸೂಲಾತಿ, ದಿನವಹಿ ವ್ಯಾಪಾರಿಗಳ ನೆಲ ಸುಂಕ ಹಾಗೂ ಮಳಿಗೆಗಳ ಬಹಿರಂಗ ಹರಾಜು ಸಂಬಂಧ ಚರ್ಚಿಸಲಾಯಿತು.

ಬಜೆಟ್ ಪೂರ್ವಭಾವಿ ಸಭೆ:

ಬಳಿಕ ನಡೆದ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಅವರು 81 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ, 100 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ, ರಸ್ತೆಗಳ ಅಭಿವೃದ್ಧಿ, 1 ಕೋಟಿ ರೂ. ವೆಚ್ಚದಲ್ಲಿ ಬೀದಿ ದೀಪಗಳ ನಿರ್ವಹಣೆ, 1 ಕೋಟಿ ರೂ. ವೆಚ್ಚದಲ್ಲಿ ಶೌಚಗೃಹಗಳ ಅಭಿವೃದ್ಧಿ, ಸಮುದಾಯ ಶೌಚಗೃಹಗಳ ನಿರ್ಮಾಣ, 4 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಸಂಬಂಧ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ವರದಿ ಮಂಡಿಸಿದರು. ಈ ವೇಳೆ ಸದಸ್ಯರು ಹಾಗೂ ಸಾರ್ವಜನಿಕರಿಂದ ಅಗತ್ಯ ಸಲಹೆ, ಸೂಚನೆ ಪಡೆಯಲಾಯಿತು.

ಸಭೆಯಲ್ಲಿ ಪಪಂ ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯರಾದ ಹರೀಶ್‌ಕುಮಾರ್, ಮಹೇಶ್, ಸೋಮಶೇಖರ್, ಸುದೇಶ್, ಗಿರೀಶ್, ಮಹೇಶ್‌ನಾಯಕ್, ಬಸವರಾಜು, ಪವಿತ್ರಾ, ಚಿಕ್ಕತಾಯಮ್ಮ ಹಾಗೂ ಕಚೇರಿ ಅಧಿಕಾರಿಗಳು, ನೌಕರರು ಇದ್ದರು.