ಜಿಲ್ಲೆ

ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಿ

ಉತ್ತರ ಕನ್ನಡ ಡೆಸ್ಕ್

ಅಂಕೋಲಾ: ಹೆಣ್ಣು ಮಕ್ಕಳು ಪೊಲೀಸ್ ಇಲಾಖೆಗೆ ಸೇರುವುದು ತೀರ ವಿರಳವಾಗಿದೆ. ಉತ್ತಮ ಬೌದ್ಧಿಕ ಮಟ್ಟ ಹೊಂದಿರುವ ಈ ಭಾಗದ ಹೆಣ್ಣು ಮಕ್ಕಳು ಪೊಲೀಸ್ ಇಲಾಖೆ ಸೇರಿದರೆ ಪೊಲೀಸ್ ಇಲಾಖೆ ಇನ್ನಷ್ಟು ಬಲಿಷ್ಠವಾಗಲಿದೆ. ಇದಕ್ಕೆ ಪಾಲಕರು ಮಾರ್ಗದರ್ಶನ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕು ಎಂದು ಡಿವೈಎಸ್ಪಿ ಅಂಜುಮಾಲಾ ನಾಯಕ ಹೇಳಿದರು.

ಅಗಸೂರು ಕೆಪಿಎಸ್ ಶಾಲೆಯ ಆವರಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಶನಿವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೃಕ್ಷಮಾತೆ ಪದ್ಮಶ್ರೀ ಡಾ.ತುಳಸಿ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಗಿಡ ನೆಡುವ ಪ್ರವೃತ್ತಿ ಬೆಳೆಯಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಡಾ.ತುಳಸಿ ಗೌಡ, ರಾಷ್ಟ್ರಪತಿ ಪದಕ ಪುರಸ್ಕೃತೆ ಡಿವೈಎಸ್ಪಿ ಅಂಜುಮಾಲಾ ನಾಯಕ, ಕಲಾವಿದ ಕುಮಾರ ಕಡೆಮನೆ ಅವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ನಾಯಕ ಪ್ರಾಸ್ತವಿಕವಾಗಿ ಮಾತನಾಡಿದರು. ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯಕ, ಉಪಾಧ್ಯಕ್ಷ ಯಶವಂತ ಟಿ.ಗೌಡ, ಸಹಕಾರಿ ಧುರೀಣ ಡಿ.ಎನ್. ನಾಯಕ, ನಿವೃತ್ತ ತಹಸೀಲ್ದಾರ್ ವಿ.ಜೆ. ಲಾಂಜೇಕರ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ರವಿ ಆರ್. ನಾಯಕ, ಎಸ್‌ಡಿಎಂಸಿ ಉಪಾಧ್ಯಕ್ಷ ದೇವಾನಂದ ನಾಯಕ ಉಪಸ್ಥಿತರಿದ್ದರು. ಸಂಜೀವ ನಾಯಕ ನಿರ್ವಹಿಸಿದರು. ನಂತರ ಕುಮಾರ ಕಡೆಮನಿ ತಂಡದವರು ರಸಮಂಜರಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.