ಕೊಪ್ಪಳದಲ್ಲಿ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಚುನಾವಣಾಧಿಕಾರಿಗಳ ಸಭೆ ನಡೆಯಿತು. ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಚುನಾವಣಾ ತಹಸೀಲ್ದಾರ್ ರವಿ ವಸದ ಇತರರಿದ್ದರು. 
ಜಿಲ್ಲೆ

ದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ

ಗಾಯತ್ರಿ ಮಾಲಿಪಾಟೀಲ್

ಕೊಪ್ಪಳ; ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಿಎಲ್‌ಒಗಳು ಮನೆ ಮನೆಗೆ ಸಮೀಕ್ಷೆ ನಡೆಸಿ ದೋಷರಹಿತ ಮತದಾರರ ಪಟ್ಟಿ ತಯಾರಿಸಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಅಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ. ತಿದ್ದುಪಡಿ ಮತ್ತು ಹೊಸ ಮತದಾರರ ಸೇರ್ಪಡೆಗೆ ಅವಕಾಶವಿದೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಹೊಸ ಮತದಾರರು, ಸ್ಥಳಾಂತರ, ಮರಣ ಹೊಂದಿದವರ ವಿವರ ಕೂಲಂಕುಷವಾಗಿ ವೀಕ್ಷಿಸಬೇಕು. ಮಾಸ್ಟರ್ ಟ್ರೈನರ್‌ಗಳು ಬಿಎಲ್‌ಒಗಳಿಗೆ ತರಬೇತಿ ನೀಡಬೇಕು. ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆ, ಮತದಾನ ಪ್ರದೇಶ, ಮತದಾರರ ಪಟ್ಟಿ ನವೀಕರಿಸಿ ನಿಖರ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.

ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಮತದಾರರು ಹಕ್ಕುಗಳು ಮತ್ತು ಆಕ್ಷೇಪಣೆಗೆ ಅರ್ಜಿ ನಮೂನೆ 6, 7 ಮತ್ತು 8ರಲ್ಲಿ ಸ್ವೀಕರಿಸಬೇಕು. ಹಕ್ಕುಗಳು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಪರಿಶೀಲನೆ ವಾಡಿ ಇಆರ್‌ಒಗೆ ವರದಿ ಸಲ್ಲಿಸಬೇಕು. ಮನೆ ಮನೆಗೆ ಭೇಟಿ ನೀಡಿ, ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತಿರುವ ಹೆಸರುಗಳು, ವರ್ಗಾವಣೆಗೊಂಡ, ಸ್ಥಳಾಂತರಗೊಂಡ, ವಲಸೆ ಬಂದ ಅಥವಾ ಮೃತ ಮತದಾರರನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಿದರು.

ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ವಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಭಾರತ ಚುನಾವಣಾ ಆಯೋಗ ನೀಡಿರುವ ಕ್ರಮಗಳನ್ನು ಅನುಸರಿಸಬೇಕು. ಮನೆ ಸಮೀಕ್ಷೆ ವೇಳೆ ಪರಿಚಯದ ಜತೆ ಗುರುತಿನ ಚೀಟಿ ತೋರಿಸಿ ನಿಮ್ಮ ಉದ್ದೇಶ ತಿಳಿಸಬೇಕು ಎಂದರು.

ಚುನಾವಣಾ ತಹಸೀಲ್ದಾರ್ ರವಿ ವಸದ, ತಹಸೀಲ್ದಾರ್‌ಗಳು, ಚುನಾವಣೆ ಶಾಖೆ ಸಿಬ್ಬಂದಿ, ಮಾಸ್ಟರ್ ಟ್ರೈನರ್‌ಗಳು ಇದ್ದರು.