ವಿಜಯವಾಣಿ ಸುದ್ದಿಜಾಲ ಉಡುಪಿ
ನಮ್ಮ ಹಿಂದಿನ ಪರ್ಯಾಯ (ತೃತೀಯ)ದ ಸಂದರ್ಭದಲ್ಲಿ ಗುಜರಾತ್ನ ಮುಖ್ಯಮಂತ್ರಿಯಾಗಿ ಆಗಮಿಸಿದ್ದ ನರೇಂದ್ರ ಮೋದಿ ಅವರು ನಮ್ಮ ಪ್ರಸ್ತುತ ಚತುರ್ಥ ಪರ್ಯಾಯದ ಸಂದರ್ಭದಲ್ಲಿ ದೇಶದ ಪ್ರಧಾನಿಯಾಗಿ ಆಗಮಿಸುತ್ತಿದ್ದಾರೆ. ಹೀಗಾಗಿ ತಿಂಗಳ ಕಾಲ ನಡೆಯಲಿರುವ ಬೃಹತ್ ಗೀತೋತ್ಸವ ಕಾರ್ಯಕ್ರಮವು ಉಡುಪಿಯ ಸಭ್ಯತೆ, ಸಂಸ್ಕೃತಿ, ಆತಿಥ್ಯಗಳ ವಿಶೇಷತೆ ವಿಶ್ವಕ್ಕೆ ತಿಳಿಯುವಂತೆ ಆಯೋಜಿಸಬೇಕಿದೆ. ಈ ಐತಿಹಾಸಿಕ ಸಮಾರಂಭವು ಸಮಗ್ರ ಉಡುಪಿಯ ಗೌರವ ಹೆಚ್ಚಿಸುವಂತೆ ಎಲ್ಲರೂ ಕೈಜೋಡಿಸಬೇಕು ಎಂದು ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆ ನೀಡಿದರು.
ಉಡುಪಿ ಪರ್ಯಾಯ ಪುತ್ತಿಗೆ ಮಠದಿಂದ ನ.8ರಿಂದ ಡಿ..7ರ ವರೆಗೆ ಜರುಗಲಿರುವ ಬೃಹತ್ ಗೀತೋತ್ಸವ ಹಾಗೂ ನ.28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭೇಟಿ ನಿಮಿತ್ತ ಗೀತಾ ಮಂದಿರದಲ್ಲಿ ಸೋಮವಾರ (ನ.3) ಆಯೋಜಿಸಿದ್ದ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೆಳಪು ದೇವಿಪ್ರಸಾದ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ಕಮಿಷನರ್ ರಶ್ಮಿ, ತಹಸೀಲ್ದಾರ್ ಗುರುರಾಜ್ ಇತರರು ಉಪಸ್ಥಿತರಿದ್ದರು.
ಶ್ರೀಮಠದ ಪ್ರಮುಖರಾದ ಸಂತೋಷ ಶೆಟ್ಟಿ ತೆಂಕರಗುತ್ತು, ರತೀಶ್ ತಂತ್ರಿ, ಪ್ರಮೋದ್ ಸಾಗರ್, ಯೋಗೀಂದ್ರ ಭಟ್, ರವೀಂದ್ರ ಆಚಾರ್ಯ ಇತರರು ಇದ್ದರು. ಮಠದ ದಿವಾನ ನಾಗರಾಜ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಂದಿಸಿದರು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಆಯೋಜಿಸುವ ಎಲ್ಲ ಕಾರ್ಯಕ್ರಮಗಳೂ ವಿಶೇಷವಾಗಿರುತ್ತವೆ. ಶ್ರೀಗಳ ಹಿಂದಿನ ಪರ್ಯಾಯದಲ್ಲಿಯೂ ಸಹ ಉಡುಪಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಸಕ್ತ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವುದರಿಂದ ಉಡುಪಿಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಗಲಿದೆ. ತನ್ನಿಮಿತ್ತ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಪಕ್ಷ ಭೇದ ಮರೆತು ಸಹಕರಿಸಬೇಕು. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ