ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಅಪ್ರಾಪ್ತ 14 ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ ಸಿಇಎನ್ ಪೊಲೀಸರು ವಿಚಾರಣೆ ನಡೆಸಿದ್ದು, ಪ್ರಮುಖ ಆರೋಪಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಇವರು ಕೋಲಾರ ಮತ್ತು ಬಂಗಾರಪೇಟೆಯ 3 ಶಾಲೆಗಳ ವಿದ್ಯಾರ್ಥಿಗಳಾಗಿದ್ದು, ಈ ಬಗ್ಗೆ ಪಾಲಕರು ಮತ್ತು ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ಹಲೋ ಆಪ್ನಲ್ಲಿ ಅಪ್ಲೋಡ್ ಆಗಿದ್ದ ಗಣಿತ ಪ್ರಶ್ನೆಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಂಡ ವಿದ್ಯಾರ್ಥಿಗಳು ಮುಖ್ಯಪರೀಕ್ಷೆ ಸಿದ್ಧತೆ ನಡೆಸಲು ವಾಟ್ಸ್ಆಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು.
ಈ ಬಗ್ಗೆ ಫೆ.15ರಂದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಅಧಿಕಾರಿಗಳು ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಶೇಷ ತಂಡ ಹಲೋ ಆಪ್ ಸುಳಿವಿನ ಮೇರೆಗೆ 14 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಹಲೋ ಆಪ್ ಬಗ್ಗೆ ತಿಳಿಸಿದ ಪ್ರಮುಖ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ. ವಿದ್ಯಾರ್ಥಿಗಳ ಮೊಬೈಲ್ಗಳನ್ನು ಸಿಐಡಿ ಸೈಬರ್ ಲ್ಯಾಬ್ಗೆ ರವಾನಿಸಲಾಗಿದೆ.
ಮೊದಲು ಪ್ರಶ್ನೆ ಪತ್ರಿಕೆ ಅಪ್ಲೋಡ್ ಮಾಡಿದವನ ಬಗ್ಗೆ ಹಲೋ ಆಪ್ ಅಭಿವೃದ್ಧಿ ಪಡಿಸಿದ ಕಂಪನಿ ಬಳಿ ಮಾಹಿತಿ ಕೇಳಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿ ಹರಡುತ್ತಿದಂತೆ ಆಪ್ ಡಿಲೀಟ್ ಮಾಡಲಾಗಿದೆ. ರಾಕೇಶ್ 8105 ಐಡಿ ಯಿಂದ ಅಪ್ಲೋಡ್ ಆಗಿರುವ ಸುಳಿವು ಸಿಕ್ಕಿದೆ.