ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಪರಂಪರೆ, ಆಚರಣೆಗಳಾದ ಯೋಗ ಮತ್ತು ಅಗ್ನಿಹೋತ್ರ ಸಂಪೂರ್ಣ ಆರೋಗ್ಯಮಯ ಜೀವನಕ್ಕೆ ಅಡಿಪಾಯಗಳು. ಯೋಗ, ಧ್ಯಾನ, ಪ್ರಾಣಾಯಾಮಗಳು ದೇಹ ಮತ್ತು ಮನಸ್ಸಿಗೆ ಉಲ್ಲಾಸ ನೀಡಿದರೆ, ಅಗ್ನಿಹೋತ್ರ ಹೊಸ ಚೈತನ್ಯ ನೀಡುತ್ತದೆ. ಪ್ರತಿದಿನ ಯೋಗ ಮತ್ತು ಅಗ್ನಿಹೋತ್ರ ಮಾಡಿದರೆ ನೂರು ವರ್ಷ ಆರೋಗ್ಯದಿಂದ ಇರಬಹುದು ಎಂದು ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಹೇಳಿದರು.
ನಗರದ ಮದಿಹಾಳದ ಚಿದಂಬರ ಸೇವಾ ಸಮಿತಿ ಸಭಾಭವನದಲ್ಲಿ ಪತಂಜಲಿ ಯೋಗ ಪೀಠದಿಂದ ಶುಕ್ರವಾರ ಆಯೋಜಿಸಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರದ ಪೂರ್ವಭಾವಿ ಬೈಠಕ್ ಮತ್ತು ಸರಳ ಅಗ್ನಿಹೋತ್ರ ಅಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು 10ನೇ ವಿಶ್ವ ಯೋಗ ದಿನ ಆಚರಿಸಿದರೂ ಕೇವಲ ಶೇ. 1ರಷ್ಟು ಜನ ಪ್ರತಿದಿನ ಯೋಗಾಭ್ಯಾಸ ಮಾಡುತ್ತಿದ್ದಾರೆ. ಅಗ್ನಿಹೋತ್ರದ ಮಹತ್ವ ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ, ಅದು ವೆಚ್ಚದಾಯಕ ಎನ್ನುವವರೇ ಹೆಚ್ಚು. ವಾಸ್ತವವಾಗಿ ಒಂದು ಕಪ್ ಚಹಾ- ಕಾಫಿ ದರದಲ್ಲಿ ಆರೋಗ್ಯಮಯ ಅಗ್ನಿಹೋತ್ರ ಅಭ್ಯಾಸ ನಮ್ಮದಾಗುತ್ತದೆ. ಸಮಾಜದ ಎಲ್ಲರಿಗೂ ಯೋಗ, ಅಗ್ನಿಹೋತ್ರದ ಸತ್ಯಾಸತ್ಯತೆ ತಿಳಿಯಬೇಕು. ಈ ಉದ್ದೇಶದೊಂದಿಗೆ ಪತಂಜಲಿ ಯೋಗ ಪೀಠದ ವತಿಯಿಂದ ನಗರದ ವಿವಿಧೆಡೆ 25 ದಿನಗಳ ಯೋಗ ಶಿಕ್ಷಕರ ತರಬೇತಿ ಶಿಬಿರ ನಡೆಸಲಾಗುವುದು. ಆಸಕ್ತರು ಪತಂಜಲಿ ಕಾರ್ಯಾಲಯವನ್ನು ಸಂಪರ್ಕಿಸಬೇಕು ಎಂದರು.
ಗ್ರಾಮ ವಿಕಾಸ ಸೊಸೈಟಿ ಮತ್ತು ಯೂನಿರ್ಸಲ್ ನಾಲೆಡ್ಜ್ ಸಂಸ್ಥೆಯಿ0ದ ಅಗ್ನಿಹೋತ್ರ ಜಾಗೃತಿಗಾಗಿ ಏ. 13ರಂದು ನಗರದಲ್ಲಿ ಅಗ್ನಿಹೋತ್ರ ವಿಶ್ವದಾಖಲೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಕ್ಕೆ ಪತಂಜಲಿ ಪರಿವಾರದಿಂದ ಸಹಕಾರ ನೀಡಲಾಗುತ್ತಿದೆ. ವಿಶ್ವದಾಖಲೆಗೆ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿ ಸರಳ ಅಗ್ನಿಹೋತ್ರ ತರಬೇತಿ ನೀಡಲಾಗುತ್ತದೆ ಎಂದರು.
ಸಾರ್ವಜನಿಕರಿಗೆ ಸರಳ ಅಗ್ನಿಹೋತ್ರದ ಪ್ರಾತ್ಯಕ್ಷಿಕೆ ನೀಡಲಾಯಿತು. ಜಗದೀಶ ಶೇಖರ್ ನಾಯಕ್, ಅಶ್ವಿನಿ ನಾಯಕ್, ಮಾಧವ ಭಂಡಾರಿ, ಗಿರೀಶ ಮತ್ತಿಕೊಪ್ಪ, ಸುರೇಶ ಕುಲರ್ಣಿ, ಉಮಾ ಅಗಡಿ, ರಮೇಶ ಸುಲಾಖೆ, ಎಂ.ಡಿ. ಪಾಟೀಲ, ಶೈಲಜಾ ಮಾಡಿಕರ, ಲಕ್ಷ್ಮೀ ಭಾಸ್ಕರ ಬಡಿಗೇರ, ಬಲರಾಜ ಸಿಂಗ್ ಜಾವೂರ, ಇತರರು ಪಾಲ್ಗೊಂಡಿದ್ದರು.