ಜಿಲ್ಲೆ

ಮಾಗಿ ಉತ್ಸವ, ಬ್ರಾೃಂಡ್ ಫೆಸ್ಟ್‌ಗೆ ತಯಾರಿ

ಸದೇಶ್ ಕಾರ್ಮಾಡ್ ಮೈಸೂರು

ವರ್ಷಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಈ ಬಾರಿಯೂ ಮಾಗಿ ಉತ್ಸವವನ್ನು (ವಿಂಟರ್ ಫೆಸ್ಟಿವಲ್) ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು, ಇದರ ಜತೆಗೆ ವರ್ಷಾರಂಭದಲ್ಲಿ ಪ್ರವಾಸಿಗರನ್ನು ಸೆಳೆಯಲು ‘ಬ್ರಾೃಂಡ್ ಮೈಸೂರು ಫೆಸ್ಟ್’ ಆಯೋಜಿಸಲು ತಯಾರಿ ನಡೆಯುತ್ತಿದೆ.

ವರ್ಷಾಂತ್ಯಕ್ಕೆ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಾಗಿ ಉತ್ಸವ ಆಕರ್ಷಣೆಯಾದರೆ, ವರ್ಷಾರಂಭದಲ್ಲಿ ಆಗಮಿಸುವ ಪ್ರವಾಸಿ ಗರಿಗೆ ‘ಬ್ರಾೃಂಡ್ ಮೈಸೂರು ಫೆಸ್ಟ್’ ಮುದ ನೀಡಲಿದೆ. ಸಾಮಾನ್ಯವಾಗಿ ವರ್ಷಾಂತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಆ ನಂತರ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತದೆ. ಹೀಗಾಗಿ ಜನವರಿ ಮೊದಲ ಅಥವಾ ಎರಡನೇ ವಾರದಲ್ಲೂ ಪ್ರವಾಸಿ ಗರನ್ನು ಸೆಳೆಯಲು ‘ಬ್ರಾೃಂಡ್ ಮೈಸೂರು ಫೆಸ್ಟ್’ ಆಯೋಜಿಸಲಾಗುತ್ತಿದೆ. ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಆಯೋಜಿಸಲು ತಯಾರಿ ನಡೆಯುತ್ತಿದ್ದು, ಮತ್ತೊಂದೆಡೆ ಪ್ರವಾಸೋದ್ಯಮ ಇಲಾಖೆಯಿಂದ ‘ಬ್ರಾೃಂಡ್ ಮೈಸೂರು ಫೆಸ್ಟ್’ ಆಯೋಜಿಸಲಾಗುತ್ತಿದೆ.

ಮಾಗಿ ಉತ್ಸವ: ಮಾಗಿ ಉತ್ಸವವನ್ನು ವರ್ಷಾಂತ್ಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಎಷ್ಟು ದಿನ ಹಾಗೂ ಯಾವಾಗ ಆಚರಿಸಬೇಕು ಎಂಬುದು ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಮಾಗಿ ಉತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಬೊಂಬೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಡಿಸೆಂಬರ್ ಅಂತ್ಯದಲ್ಲಿ ಪ್ರತಿವರ್ಷ ಸಾಕಷ್ಟು ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಾರೆ. ಕಳೆದ ಬಾರಿ ಡಿ.30 ಮತ್ತು 31 ಕ್ರಮವಾಗಿ ಶನಿವಾರ, ಭಾನುವಾರ ಬಂದಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದರು. ಆದರೆ, ಈ ಬಾರಿ ಡಿ.30, 31 ಸೋಮವಾರ, ಮಂಗಳವಾರ ಬಂದಿದೆ. ಹೀಗಾಗಿ ಕೆಲಸದ ದಿನಗಳಲ್ಲೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಮತ್ತಷ್ಟು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುವ ಅವಶ್ಯಕತೆ ಇದ್ದು, ಇದಕ್ಕೆ ಬೇಕಾದ ತಯಾರಿ ಅರಮನೆ ಮಂಡಳಿಯಿಂದ ನಡೆಯುತ್ತಿದೆ.

ಪ್ರತಿ ಬಾರಿ ಮಾಗಿ ಉತ್ಸವದ ಸಂದರ್ಭದಲ್ಲಿ ಕೇಕ್ ಉತ್ಸವವನ್ನು ಹೋಟೆಲ್ ಮಾಲೀಕರ ಸಂಘದ ಸಹಯೋಗದೊಂದಿಗೆ ಜಿಲ್ಲಾಡಳಿತ ಹಮ್ಮಿಕೊಳ್ಳುತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅರಮನೆ ಆವರಣದಲ್ಲಿ ನಡೆಯುವ ಮಾಗಿ ಉತ್ಸವ ಕಾರ್ಯಕ್ರಮ ಹಾಗೂ ಪ್ರವಾಸೋದ್ಯಮ ಇಲಾಖೆ ನಡೆಸುವ ‘ಬ್ರಾೃಂಡ್ ಮೈಸೂರು ಫೆಸ್ಟ್’ ಕಡೆಗೆ ಮಾತ್ರ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಕೇಕ್ ಉತ್ಸವ ನಿರ್ಲಕ್ಷೃಕ್ಕೆ ಗುರಿಯಾಗಿದೆ. ಮಾಗಿ ಉತ್ಸವದಲ್ಲಿ ನಡೆಸುತ್ತಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಅಪಾರ ಸಂಖ್ಯೆಯಲ್ಲಿ ಯುವಜನರನ್ನು ಹಾಗೂ ಪ್ರವಾಸಿಗರನ್ನು ಸೆಳೆಯುತಿತ್ತು. ಆದರೆ, ಭದ್ರತೆಯ ಕಾರಣಕ್ಕೆ ಮಾಗಿ ಉತ್ಸವದಲ್ಲಿ ನಡೆಯುತ್ತಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್‌ಅನ್ನು ನಡೆಸುವುದನ್ನು ಕೈಬಿಡಲಾಗಿದೆ.

ಬ್ರಾೃಂಡ್ ಮೈಸೂರು ಫೆಸ್ಟ್ : ಪ್ರಥಮ ಬಾರಿಗೆ 2023ರಲ್ಲಿ ಪ್ರವಾಸೋದ್ಯಮ ಇಲಾಖೆಯು ನಗರದ ಮಾನಸಗಂಗೋತ್ರಿ ಆವರಣದಲ್ಲಿ ‘ಬ್ರಾೃಂಡ್ ಮೈಸೂರು ಫೆಸ್ಟ್’ ಆಯೋಜಿಸಿತ್ತು. ಈ ಉತ್ಸವಕ್ಕೆ ಅಭೂತಪೂರ್ವ ಬೆಂಬಲ ದೊರೆತ ಹಿನ್ನೆಲೆಯಲ್ಲಿ ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ಉತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಉತ್ಸವ ಆಯೋಜನೆಗೆ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಅಧ್ಯಕ್ಷತೆಯಲ್ಲಿ ಉದ್ಯಮಿಗಳ ಸಭೆ ಆಯೋಜಿಸಲಾಗಿತ್ತು.

ಕಳೆದ ಬಾರಿಯಂತೆ ಈ ಬಾರಿಯೂ ಚಿತ್ರಸಂತೆ, ಫುಡ್‌ಫೆಸ್ಟ್ ಆಯೋಜಿಸಲು ಉದ್ದೇಶಿಸಲಾಗಿದೆ. ಈ ಉತ್ಸವಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವಂತೆ ಮಾಡಲು ಚಿತ್ರಸಂತೆ, ಫುಡ್‌ಫೆಸ್ಟ್ ಜತೆಗೆ ವೈವಿಧ್ಯಯ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚೆ ನಡೆದಿದೆ. ಬ್ರಾೃಂಡ್ ಮೈಸೂರು ಫೆಸ್ಟ್ ಉತ್ಸವ ಆಚರಣೆಗೆ ಸ್ಥಳ ಹಾಗೂ ದಿನಾಂಕ ಅಂತಿಮಗೊಳ್ಳಬೇಕಾಗಿದೆ.

ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿ: ಮಾಗಿ ಉತ್ಸವ, ಬ್ರಾೃಂಡ್ ಮೈಸೂರು ಫೆಸ್ಟ್‌ನಂತಹ ಉತ್ಸವಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಉತ್ಸವಕ್ಕೆ ಆಗಮಿಸುವ ಜನರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಅಲ್ಲದೆ, ನಗರ ಹಾಗೂ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳಲಿದೆ.

ಅರಮನೆ ಆವರಣದಲ್ಲಿ ವರ್ಷಾಂತ್ಯದಲ್ಲಿ ಮಾಗಿ ಉತ್ಸವ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಎಂದಿನಂತೆ ಈ ಬಾರಿಯೂ ಫಲಪುಷ್ಪ ಪ್ರದರ್ಶನ, ಬೊಂಬೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉತ್ಸವದ ದಿನಾಂಕವನ್ನು ಒಂದೆರಡು ದಿನಗಳ ಒಳಗೆ ಅಂತಿಮಗೊಳಿಸಲಾಗುವುದು.

ಟಿ.ಎಸ್. ಸುಬ್ರಹ್ಮಣ್ಯ, ಉಪ ನಿರ್ದೇಶಕ, ಅರಮನೆ ಮಂಡಳಿ

ಜನವರಿ ತಿಂಗಳಿನಲ್ಲಿ ಮೈಸೂರಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು 2024ರಲ್ಲಿ ಪ್ರಥಮ ಬಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ‘ಬ್ರಾೃಂಡ್ ಮೈಸೂರು ಫೆಸ್ಟ್’ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ಈ ಬಾರಿ ದೊಡ್ಡ ಮಟ್ಟದಲ್ಲಿ ಉತ್ಸವ ಹಮ್ಮಿಕೊಳ್ಳಲು ತಯಾರಿ ನಡೆದಿದೆ. ಮೈಸೂರಿನ ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು, ಚಿತ್ರಸಂತೆ, ಫುಡ್‌ಫೆಸ್ಟ್‌ಅನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಎಂ.ಕೆ. ಸವಿತಾ, ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ