ವಿಜಯಪುರ: ಯುವ ಜನತೆಯಲ್ಲಿ ಸಾಂಸ್ಕೃತಿಕ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ‘ವಿಜಯಪುರ ಸಾಂಸ್ಕೃತಿಕ ಜನೋತ್ಸವ’ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಭರದ ಸಿದ್ಧತೆ ಆರಂಭಗೊಂಡಿದೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಂಚಾಲಕ ಎಚ್.ಟಿ. ಭರತಕುಮಾರ ತಿಳಿಸಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಏ. 12 ಮತ್ತು 13ರಂದು ಈ ಜನೋತ್ಸವ ನಡೆಯಲಿದೆ. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್‌ಒ, ಎಐಎಂಎಸ್‌ಎಸ್ ಹಾಗೂ ಎಐಡಿವೈಒ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದೆ. ಈಗಾಗಲೇ ಇಂಥ 13 ಉತ್ಸವಗಳು ಪೂರ್ಣಗೊಂಡಿದ್ದು, ಇದೀಗ ನಡೆಯುತ್ತಿರುವ 14ನೇ ಉತ್ಸವವನ್ನು ನವೋದಯದ ಹರಿಕಾರ ಜ್ಯೋತಿಬಾ ಫುಲೆ ಜನ್ಮ ದಿನಕ್ಕೆ ಸಮರ್ಪಿಸಲಾಗಿದೆ ಎಂದು ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕುಸಿಯುತ್ತಿರುವ ಸಂಸ್ಕೃತಿ ಮತ್ತು ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಉತ್ಸವದ ಉದ್ದೇಶವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಅಶ್ಲೀಲ ಸಂದೇಶಗಳು, ಸಿನೆಮಾ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು, ಆನ್‌ಲೈನ್ ಗೇಮ್, ಡ್ರಗ್ಸ್ ಮುಂತಾದವುಗಳು ಯುವಜನತೆಯ ನಿದ್ರೆ ಕೆಡಿಸಿವೆ. ಮೊಬೈಲ್ ಬಳಕೆ ಗೀಳಾಗಿ ಪರಿಣಮಿಸಿದೆ. ವಿಪರೀತ ಸ್ವಾರ್ಥ, ದುರಾಸೆ, ಮೋಸ, ವಂಚನೆ, ಪಕ್ಷಪಾತ ಮುಂತಾದವುಗಳು ಇಂದು ಜನಜೀವನದ ಭಾಗವಾಗಿವೆ. ಪ್ರಾಮಾಣಿಕತೆ, ನೀತಿ, ಮೌಲ್ಯ, ಸಂಸ್ಕೃತಿ, ಆದರ್ಶಗಳ ಬಗ್ಗೆ ಮಾತನಾಡುವವರನ್ನು ಯಾವುದೋ ಲೋಕದಿಂದ ಬಂದವರಂತೆ ನೋಡುವಂಥ ವಾತಾವರಣ ಸೃಷ್ಠಿಯಾಗಿದೆ. ಇಂಥ ವಾತಾವರಣದಲ್ಲಿ ಭಗತ್ ಸಿಂಗ್, ನೇತಾಜಿ, ವಿದ್ಯಾಸಾಗರ, ಜ್ಯೋತಿಬಾ ಫುಲೆ ಮುಂತಾದವರ ವಿಚಾರಗಳನ್ನು, ಉನ್ನತ ನೀತಿ-ಸಂಸ್ಕೃತಿ, ಮೌಲ್ಯಗಳನ್ನು ಜನರಲ್ಲಿ ಬಿತ್ತಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಜನೋತ್ಸವ ಆಯೋಜಿಸಲಾಗಿದೆ ಎಂದರು.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಏ. 12 ರಂದು ಸಂಜೆ 6ಕ್ಕೆ ಖ್ಯಾತ ಕವಿ ಡಾ.ಸತ್ಯಾನಂದ ಪಾತ್ರೋಟ ಉದ್ಘಾಟನೆ ನೆರವೇರಿಸುವರು. ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಕಾ. ಕೆ.ಸೋಮಶೇಖರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಿದ್ದಲಿಂಗ ಬಾಗೇವಾಡಿ ಅಧ್ಯಕ್ಷತೆ ವಹಿಸುವರು. ಕಾವೇರಿ ರಜಪೂತ ಪ್ರಾಸ್ತಾವಿಕವಾಗಿ ಮಾತನಾಡುವರು. ಗೀತಾ ಎಚ್ ಹಾಗೂ ಅಶೋಕ ದೇಸಾಯಿ ಉಪಸ್ಥಿತರಿರುವರು ಎಂದು ತಿಳಿಸಿದರು.
ವಿದೂಷಿ ಲಕ್ಷ್ಮಿ ತೇರದಾಳಮಠ ಅವರ ನಾಟ್ಯಕಲಾ ಶಾಲೆ ವಿದ್ಯಾರ್ಥಿಗಳಿದ ನೃತ್ಯ ರೂಪಕ, ಧಾರವಾಡದ ಆಕಾಶವಾಣಿ ಬಿ ಹೈಗ್ರೇಡ್ ಕಲಾವಿದೆ ಕೃತಿಕಾ ಜಂಗಿನಮಠ ಅವರಿಂದ ಕೊಳು ವಾದನ, ತಿಕೋಟಾದ ಸ್ವಾಮಿ ವಿವೇಕಾನಂದ ಮಾಡೆಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಜನಪದ ನೃತ್ಯ, ಸ್ವಯಂಭೋ ಆರ್ಟ್ ಫೌಂಡೇಶನ್‌ನ ಕಲಾವಿದೆಯರಾದ ದೀಕ್ಞಾ ಭೀಸೆ ಹಾಗೂ ದಿವ್ಯಾ ಭೀಸೆ ಕಲಾತಂಡದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ನಂತರ ಮೋಜಿ ಸೀಮೆಯಾಚೆ ಒಂದೂರು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಏ. 13 ರಂದು ಬೆಳಗ್ಗೆ 11ಕ್ಕೆ ಸಾಹಿತಿ ಸುಭಾಷ ಯಾದವಾಡರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಂಜೆ 5.30ಕ್ಕೆ ಬಿ. ಸುರೇಶ ನಿರ್ದೇಶನದ ದೇವರ ನಾಡಲ್ಲಿ ಸಿನೆಮಾ ಪ್ರದರ್ಶನಗೊಳ್ಳಲಿದೆ. ನಂತರ ಪತ್ರಕರ್ತ ಅನಿಲ ಹೊಸಮನಿ ಅವರು ಸಂವಾದ ನಡೆಸಿಕೊಡುವರು. ಎರಡೂ ದಿನ ಬೆಳಗ್ಗೆ 11 ರಿಂದ ಸಂಜೆ 9ರವರೆಗೆ ಸೂಕ್ತಿ ಮತ್ತು ಛಾಯಾಚಿತ್ರ ಪದರ್ಶನ ಮತ್ತು ಸಾಹಿತ್ಯ ಪುಸ್ತಕಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಗೀತಾ ಎಚ್ ಹಾಗೂ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ ಮತ್ತಿತರರಿದ್ದರು.