ಜಿಲ್ಲೆ

ವೈರಮುಡಿ ಜಾತ್ರೆಗೆ ಸಿದ್ಧತೆ

ಲೋಕೇಶ್ ಮನು. ಡಿ

ಮೇಲುಕೋಟೆ: ಮುಂಬರುವ ವೈರಮುಡಿ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖಾ ಸಚಿವರೊಂದಿಗೆ ಸಭೆ ನಡೆಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಅಲ್ಲದೆ ಮೇಲುಕೋಟೆ ಅಭಿವೃದ್ಧಿಯ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ. ವೈರಮುಡಿ ಜಾತ್ರಾಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂದು ಮಂಗಳವಾರ ಮೇಲುಕೋಟೆಯ ಅನ್ನದಾನಭವನದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.

ಅನ್ನದಾನವನ್ನು ನಿರಂತರವಾಗಿ ಮುಂದುವರಿಸಲು ಸಮಿತಿ ರಚನೆ ಮಾಡಲು ಸೂಚಿಸಿದ್ದೇನೆ. ಅನ್ನದಾನ ನಿರ್ವಹಣೆಗಾಗಿಯೇ ಪ್ರತ್ಯೇಕ ಖಾತೆ ತೆರೆದು ದಾನಿಗಳಿಂದ ಬರುವ ಕಾಣಿಕೆಯನ್ನು ಸಮರ್ಪಕವಾಗಿ ಬಳಕೆ ಮಾಡಲು ದೇವಾಲಯದ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದೇನೆ. 2021 ರಲ್ಲೇ ಕಟ್ಟಡ ನಿರ್ಮಾಣವಾಗಿದ್ದರೂ ಹಲವಾರು ಕಾರಣಗಳಿಂದ ಅನ್ನದಾನ ಆರಂಭಿಸಲು ಆಗಿರಲಿಲ್ಲ. ಇದೀಗ ಎಲ್ಲ ಸಮಸ್ಯೆ ಬಗೆಹರಿಸಿ ಚಾಲನೆ ನೀಡಿದ್ದೇನೆ. ನನ್ನ ಶ್ರೀಮತಿ ಧನಲಕ್ಷ್ಮೀ ಅವರ ವೈಯುಕ್ತಿಕ ಖಾತೆಯಿಂದ ಅನ್ನದಾನ ನಿರ್ವಹಣೆಯ ಖಾತೆಗೆ 1ಲಕ್ಷ ರೂ. ದೇಣಿಗೆ ನೀಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಅನ್ನದಾನ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಗೆಹರಿಸಲು ಸಿದ್ಧನಿದ್ದೇನೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆಯ ಅಭಿವೃದ್ಧಿಯ ಎಲ್ಲ ರೂಪುರೇಷೆ ಸಿದ್ಧಮಾಡಿ ಅನುಷ್ಠಾನಗೊಳಿಸಲಿದ್ದಾರೆ. ಮೇಲುಕೋಟೆಯ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ. ದೇವಾಲಯದಲ್ಲಿ ಆದಾಯ ಇಲ್ಲದ ಕಾರಣ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಲು ಆಗಿಲ್ಲ ಎಂದು ತಿಳಿಸಿದರು.