ನೆಲಮಂಗಲ : ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಯಾವುದೇ ಗೊಂದಲ ಬೇಡ. ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲ ವ್ಯವಸ್ಥೆ ಮಾಡಿಕೊಡಲಿದ್ದು, ಅ.7ರಂದು ತಾಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಮಲ್ಲೇಶ್ಬೀರಪ್ಪ ಪೂಜಾರ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮುದಾಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮುದಾಯದ ಮುಖಂಡರು ನೀಡಿರುವ ಸಲಹೆ ಸ್ವೀಕರಿಸಿ ತಾಲೂಕು ಕಚೇರಿಯಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಿಸಲಾಗುವುದು ಎಂದರು. ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, 2014ರಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ ಸುಸಜ್ಜಿತ ಭವನ ನಿರ್ಮಿಸಲಾಗಿದೆ. ಆದರೆ, ರಸ್ತೆ ವ್ಯವಸ್ಥೆ ಇಲ್ಲ. ಖಾಸಗಿ ವ್ಯಕ್ತಿಯಿಂದ ರಸ್ತೆ ಬಿಡಿಸಿಕೊಡುವ ಕೆಲಸ ಮಾಡಬೇಕು. ಈಗಾಗಲೇ ಶಾಸಕರ ಗಮನಕ್ಕೆ ತಂದಿದ್ದು, ರಸ್ತೆ ಬಿಡಿಸಿಕೊಡುವಭರವಸೆ ನೀಡಿದ್ದಾರೆ. ಜತೆಗೆ ಭವನದ ಕಾಂಪೌಂಡ್ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದರು.
ನಾಲ್ಕೈದು ವರ್ಷದಿಂದ ವಾಲ್ಮೀಕಿ ಭವನ ಮುಂದಿಟ್ಟುಕೊಂಡು ಸರಳವಾಗಿ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಜಯಂತಿ ವಿಚಾರವಾಗಿ ಭವನ ಅಡ್ಡ ತರಬಾರದು. ವಾಲ್ಮೀಕಿ ಮಹರ್ಷಿಗಳು ಒಂದು ಸಮುದಾಯಕ್ಕೆ ಸೀಮಿತವಲ್ಲ. ಮಹನೀಯರು ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು. ಜತೆಗೆ ವಾಲ್ಮೀಕಿ ಭವನ ಇತ್ತೀಚೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಎಂದು ಮುಖಂಡ ದೇಗನಹಳ್ಳಿ ನರಸಿಂಹರಾಜು ಮನವಿ ಮಾಡಿದರು. ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಜತೆಗೆ ರಸ್ತೆ ಹಾಗೂ ಭವನದ ಕೆಲ ವಿಚಾರ ಕುರಿತು ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಸಮುದಾಯದ ಮುಖಂಡರುನೀಡಿರುವ ಸಲಹೆಯಂತೆ ಜಯಂತಿಯನ್ನು ತಾಲೂಕು ಕಚೇರಿಯಲ್ಲಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಮಲ್ಲೇಶ್ಬೀರಪ್ಪ ಪೂಜಾರ್ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ವ್ಯವಸ್ಥಾಪಕ ಮಂಜುನಾಥ್, ರಾಜಸ್ವ ನಿರೀಕ್ಷಕ ಶಿವಪ್ರಸಾದ್, ರಾಜ್ಯ ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷ ದೀಲಿಪ್ಕುಮಾರ್, ಜಂಟಿ ಕಾರ್ಯದರ್ಶಿ ಎನ್.ಗಂಗರಾಜು, ಮುಖಂಡ ಅನಿಲ್ಕುಮಾರ್, ಹನುಮಂತರಾಜು, ವೆಂಕಟೇಶ್ ಇತರರು ಇದ್ದರು.