ವಿಜಯಪುರ: ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ನಿಮಿತ್ತ ಆ. 1ರಂದು ವ್ಯಸನ ಮುಕ್ತ ದಿನಾಚರಣೆ ಅರ್ಥಪೂರ್ಣವಾಗಿಸಲು ನಿರ್ಧರಿಸಲಾಯಿತು.
ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಯಿತು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ಅಂದು ಬೆಳಗ್ಗೆ 9.30ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಜನಜಾಗೃತಿ ಜಾಥಾ ಆರಂಭಗೊಳ್ಳಲಿದೆ. ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಅಂಬೇಡ್ಕರ್ ಹಾಗೂ ಕನಕದಾಸ ವೃತ್ತದ ಮಾರ್ಗವಾಗಿ ಜಾಥಾ ರಂಗಮಂದಿರ ತಲುಪಿ ಸಮಾವೇಶವಾಗಿ ಮಾರ್ಪಾಡುಗೊಳ್ಳಲಿದೆ. ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನಡೆಯಲಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಯುವಜನರಿಗೆ ಹಾಗೂ ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಡಾ. ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತು, ಮನೆ-ಮನೆಗೆ ಹೋಗಿ ದುರ್ವ್ಯಸನ ಹಾಗೂ ದುಶ್ಚಟಗಳ ದಾಸ್ಯದಿಂದ ಜನಸಾಮಾನ್ಯರನ್ನು ಹೊರತರಲು ಅವಿರತ ಶ್ರಮಿಸಿದರು. ಹಲವಾರು ಸಮಾಜ ಸುಧಾರಣೆ ಕಾರ್ಯಗಳೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿಯೂ ತಮ್ಮನ್ನು ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿದ್ದ ಡಾ. ಮಹಾಂತ ಶಿವಯೋಗಿಗಳು ಸಮಾಜ ಸುಧಾರಣೆಯ ಮೊದಲ ಹಾಗೂ ಅತಿಮುಖ್ಯ ಹೆಜ್ಜೆ ಮನಃಪರಿವರ್ತನೆ ಎಂಬುದನ್ನು ಅರಿತಿದ್ದರು. ವ್ಯಸನದಿಂದ ಮುಕ್ತರಾಗಲು ಮೊದಲು ಮನಸ್ಸನ್ನು ಈ ಪಿಡುಗಿನಿಂದ ಮುಕ್ತಗೊಳಿಸಬೇಕು ಎಂದು ನಂಬಿದ್ದರು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.
ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಘೋಣಸಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕ ಅಮರೇಶ ದೊಡಮನಿ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ, ಡಾ. ಸಿ. ಪ್ರಕಾಶ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮೊಹಮ್ಮದ್ ಯಾಸೀನ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅರವಿಂದ ಲಂಬೂ, ಜಿ.ಎಂ. ಕೋಲೂರ, ಸರೋಜಿನಿ ಕೋಲ್ಕಾರ, ಸುರೇಶ ಅಂಬಿಗೇರ ಮತ್ತಿತರರಿದ್ದರು.