ಜಿಲ್ಲೆ

ಬೆಂಗಳೂರಿನಲ್ಲಿ ಕಾವೇರಿ ಆರತಿಗೆ ಸಿದ್ಧತೆ; ಯುಪಿ ಪುರೋಹಿತರ ಸಾರಥ್ಯ ಜಲಮಂಡಳಿ ಆಯೋಜನೆ

ಬೆಂಗಳೂರು: ನಗರದ ಜನರ ಜೀವಜಲವಾಗಿರುವ ಕಾವೇರಿ ಮಾತೆಗೆ ಗೌರವ ಸಲ್ಲಿಸುವ ಹಾಗೂ ಜೀವಜಲದ ಮಹತ್ವವನ್ನು ಸಾರ್ವಜನಿಕರಿಗೆ ಸಾರುವ ಉದ್ದೇಶದಿಂದ ಬಿಡಬ್ಲೂೃಎಸ್‌ಎಸ್‌ಬಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾವೇರಿ ಆರತಿಗೆ ಸಿದ್ಧತೆ ಮಾಡಿಕೊಂಡಿದೆ.

ಮಲ್ಲೇಶ್ವರದಲ್ಲಿರುವ ಐತಿಹಾಸಿಕ ಸ್ಯಾಂಕಿ ಕೆರೆಯ ದಡದಲ್ಲಿ ಮಾ.21ರಂದು ಸಂಜೆ ಕಾವೇರಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ವಿವಿಧ ಸಚಿವರು, ಶಾಸಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸುಮಾರು 10 ಸಾವಿರ ಜನ ಈ ಕಾರ್ಯಕ್ರಮಕ್ಕೆ ಆಗಮಿಸಬಹುದೆಂದು ಅಂದಾಜಿಸಲಾಗಿದ್ದು, ಈಗಾಗಲೇ ಪೂರ್ವಸಿದ್ದತಾ ಸಭೆ ನಡೆಸಲಾಗಿದೆ.

ಉತ್ತರ ಭಾರತದ ಕಾಶಿ ಮತ್ತು ಹರಿದ್ವಾರದಲ್ಲಿ ಪ್ರಸಿದ್ಧವಾಗಿರವು ಗಂಗಾರತಿಯ ಮಾದರಿಯಲ್ಲಿ ಕಾವೇರಿ ಆರತಿಯನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದಿಂದ ಪುರೋಹಿತರನ್ನು ಕರೆತರಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಬೆಂಗಳೂರಿನ ಜೀವಾಳವಾಗಿದ್ದ ಕಾವೇರಿ ನದಿಯ ಉಪನದಿ ವೃಷಭಾವತಿ ನದಿಯ ಉಗಮ ಸ್ಥಾನವಾಗಿರುವ ಸ್ಯಾಂಕಿ ಕೆರೆಯ ಆವರಣವನ್ನು ಕಾವೇರಿ ಆರತಿಗೆ ಆಯ್ಕೆ ಮಾಡಲಾಗಿದೆ. ಮಡಿಕೇರಿಯ ಭಾಗಮಂಡಲದಲ್ಲಿರುವ ಕಾವೇರಿ, ಕನ್ನಿಕಾ, ಸುಜ್ಯೋತಿ ತ್ರಿವೇಣಿ ಸಂಗಮದಿಂದ ಸಂಗ್ರಹಿಸಿ ತರುವ ಜಲವನ್ನು ಕಾರ್ಯಕ್ರಮದಲ್ಲಿ ತೀರ್ಥರೂಪದಲ್ಲಿ ವಿತರಿಸಲಾಗುತ್ತದೆ.

ಒಟ್ಟಾರೆ ವಿಶಿಷ್ಟ ಕಾರ್ಯಕ್ರಮದಲ್ಲಿ ಮೆರವಣಿಗೆ, ವಿಶೇಷ ಪೂಜೆ, ಆರತಿ, ಲೇಸರ್ ಶೋ, ಲೈವ್ ಆರ್ಕೆಸ್ಟ್ರಾ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಯಶಸ್ಸು ಆಧರಿಸಿ ಪ್ರತಿವರ್ಷ ಕಾವೇರಿ ಆರತಿ ಮುಂದುವರೆಸುವ ಆಲೋಚನೆ ಜಲಮಂಡಳಿಯ ಮುಂದಿದೆ.