ಜಿಲ್ಲೆ

ವಿಜೃಂಭಣೆಯ ರಾಮೋತ್ಸವ ಆಚರಣೆಗೆ ಸಿದ್ಧತೆ

ಆದರ್ಶ್. ಎಂ.ಕೆ.

ಮಡಿಕೇರಿ: ಏ.೬ ರಂದು ಜರುಗಲಿರುವ ರಾಮನವಮಿ ಪ್ರಯುಕ್ತ ಮಡಿಕೇರಿಯ ಕೋದಂಡರಾಮ ದೇವಾಲಯದ ರಾಮೋತ್ಸವ ಸಮಿತಿ ವತಿಯಿಂದ ಏ.೫ ರಂದು ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದರು.

ಶ್ರೀರಾಮ ಮೆಟ್ಟಿದ ಈ ಮಣ್ಣಿನಲ್ಲಿ ಸರ್ವರೂ ಒಗ್ಗಟ್ಟಿನಿಂದ ಜೀವನ ಸಾಗಿಸಬೇಕಾಗಿದೆ. ಸರ್ವ ಜನಾಂಗಗಳ ಶಾಂತಿಯ ತೋಟದ ಹೂವುಗಳು ಶ್ರೀರಾಮನಿಗೆ ಅರ್ಪಣೆಯಾಗಬೇಕಾಗಿದೆ. ಸಮುದಾಯ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಈ ರಾಮೋತ್ಸವದ ಮೂಲಕ ದೂರವಾಗಲಿದೆ. ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಉದ್ದೇಶದಿಂದ ಪ್ರತಿಯೊಂದು ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೊಸ ಪರಿಕಲ್ಪನೆಯೊಂದಿಗೆ ೩೫ನೇ ವರ್ಷದ ರಾಮೋತ್ಸವವನ್ನು ಆಚರಿಸಲಾಗುತ್ತಿದೆ. ಸುಮಾರು ೨೫ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದ್ದು, ಉಪಸಮಿತಿಗಳ ಮೂಲಕ ಎರಡು ದಿನಗಳ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏ.೫ ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಗಾಂಧಿ ಮೈದಾನದಿಂದ ಶ್ರೀ ಕೋದಂಡರಾಮ ದೇವಾಲಯದವರೆಗೆ ರಾಮದೇವರ ಮೆರವಣಿಗೆ ನಡೆಯಲಿದೆ. ಭಜನಾ ತಂಡ, ಚಂಡೆ ವಾದ್ಯ, ವಿವಿಧ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಹಾಗೂ ಭಕ್ತರು ವಾದ್ಯಗೋಷ್ಠಿಗಳೊಂದಿಗೆ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಶ್ರೀ ಕೋದಂಡ ರಾಮ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಿತಿಯ ಸದಸ್ಯ ಎಚ್.ಎನ್.ನಂಜುಂಡ ಅವರು ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಅಧ್ಯಕ್ಷ ಕೆ.ಕೆ.ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಜನೆ ನಡೆಯಲಿದೆ. ವಿವಿಧ ಮಹಿಳಾ ಸಮಿತಿಗಳ ಮುಂದಾಳತ್ವದಲ್ಲಿ ಕಳಸ ಮತ್ತು ಮಹಿಳಾ ತಂಡಗಳ ಮೆರವಣಿಗೆ ಸಾಗಲಿದೆ ಎಂದು ವಿವರಿಸಿದರು.

ಅಂದು ಸಂಜೆ ಮೆರವಣಿಗೆ ದೇವಾಲಯವನ್ನು ತಲುಪಿದ ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದ್ದು, ಎಲ್ಲಾ ಸಮುದಾಯಗಳ ಸಾಂಪ್ರದಾಯಿಕ ಕಲೆಗಳು ಪ್ರದರ್ಶನಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಏ.೫ ಮತ್ತು ೬ ರಂದು ಎರಡು ದಿನ ಸಂಜೆ ನಡೆಯಲಿದ್ದು, ಆಸಕ್ತ ತಂಡಗಳು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಮಹೇಶ್ (೯೬೬೩೩೨೬೨೦೪) ಅವರನ್ನು ಮಾರ್ಚ್ ೨೫ ರೊಳಗೆ ಸಂಪರ್ಕಿಸುವಂತೆ ಕೆ.ಎಂ.ಗಣೇಶ್ ತಿಳಿಸಿದರು.

ಏ.೬ ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠಾಪನಾ ಉತ್ಸವ ಮತ್ತು ರಾಮೋತ್ಸವದ ಪ್ರಯುಕ್ತ ವಿಶೇಷ ಪೂಜೆ ಮತ್ತು ಮಹಾಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಏ.೫ ರಂದು ಸಂಜೆ ಮೆರವಣಿಗೆಯ ನಂತರ ಲಘು ಉಪಹಾರವಿರುತ್ತದೆ ಎಂದರು.

ಸಮಿತಿಯ ಸಲಹೆಗಾರ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ನಗರದ ಸಾರ್ವಜನಿಕರೆಲ್ಲರೂ ಸೇರಿ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಅಧ್ಯಕ್ಷ ಕೆ.ಎಂ.ಗಣೇಶ್ ಅವರ ಪರಿಕಲ್ಪನೆಯಂತೆ ಇದೊಂದು ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಶ್ರೀ ಕೋದಂಡ ರಾಮ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿ, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಂಗಳೂರು ಸೇರಿದಂತೆ ವಿವಿಧ ಭಾಗದ ಕಲಾತಂಡಗಳು ಭಾಗವಹಿಸಲಿವೆ. ಸ್ಥಳೀಯ ಕಲಾತಂಡಗಳಿಗೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಅನ್ನದಾನಕ್ಕೆ ಸಹಕಾರ ನೀಡುವ ದಾನಿಗಳು ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ(೯೮೮೦೭೭೮೦೪೭) ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೋದಂಡ ರಾಮೋತ್ಸವ ಸಮಿತಿಯ ಉಪಾಧ್ಯಕ್ಷ ನವೀನ್ ಅಂಬೆಕಲ್, ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಶ್ರೀ ಕೋದಂಡ ರಾಮ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಿತಿಯ ಸದಸ್ಯ ಎಚ್.ಎನ್.ನಂಜುಂಡ ಉಪಸ್ಥಿತರಿದ್ದರು.