ಜಿಲ್ಲೆ

ಉಪ್ಪಿನಬೆಟಗೇರಿಯಲ್ಲಿ ಅದ್ದೂರಿ ಸ್ವಾತಂತ್ರ್ಯೊತ್ಸವಕ್ಕೆ ಸಿದ್ಧತೆ

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಆ. 15ರಂದು ಸ್ವಾತಂತ್ರ್ಯೊತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ವನಿಸಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮಸೂತಿ ಹೇಳಿದರು.

ಗ್ರಾಪಂ ಸಭಾಭವನದಲ್ಲಿ ಮಂಗಳವಾರ ಸ್ವಾತಂತ್ರ್ಯೊತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದ ಎಲ್ಲ ಶಾಲೆ, ಕಾಲೇಜ್, ಸರ್ಕಾರಿ ಕಚೇರಿ ಸಂಘ-ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಬಳಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೇಲೆ ಜರುಗುವ ಸಾರ್ವಜನಿಕ ಧ್ವಜಾರೋಹಣದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮದ ಕೆಲವು ಸರ್ಕಾರಿ ಶಾಲೆಗಳಲ್ಲಿನ ಕುಡಿಯುವ ನೀರು, ಆಟದ ಮೈದಾನ ನಿರ್ವಣ, ನೂತನ ಕೊಠಡಿಗಳ ನಿರ್ಮಾಣ ಸೇರಿ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, ಅವುಗಳನ್ನು ಹಂತ ಹಂತವಾಗಿ ನಿರ್ವಹಿಸಲಾಗುವುದು ಎಂದರು.

ಪಿಡಿಒ ಬಿ.ಎ. ಬಾವಾಕಾನವರ ಮಾತನಾಡಿ, ಗ್ರಾಮದ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸುವ ಮನರಂಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪುರಸ್ಕಾರ ಬಹುಮಾನ ವಿತರಿಸಲಾಗುವುದು ಎಂದರು.

ಗ್ರಾಪಂ ವತಿಯಿಂದ ನೂತನ ಅಧ್ಯಕ್ಷ ಮಂಜುನಾಥ ಮಸೂತಿ ಹಾಗೂ ಉಪಾಧ್ಯಕ್ಷೆ ಜನ್ನತಬಿ ಜೋರಮ್ಮನವರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಕಾಶಪ್ಪ ದೊಡವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಜೈನ್ನತಬಿ ಜೋರಮ್ಮನವರ ಪಿಡಿಒ ಬಿ.ಎ. ಬಾವಾಖಾನವರ, ಗ್ರಾಪಂ ಸರ್ವ ಸದಸ್ಯರು ಹಾಗೂ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.