ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಇ-ಖಾತೆ ಅಭಿಯಾನ ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಮಾತನಾಡಿದರು. ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಶಾಂತಮ್ಮ ಇತರರು ಇದ್ದರು. 
ಜಿಲ್ಲೆ

ಮೂರು ತಿಂಗಳ ಒಳಗೆ ಇ-ಖಾತೆ ನೀಡಲು ಸಿದ್ಧತೆ

ಮಾದೇಶ್ ತಿ.ನರಸೀಪುರ

ಯಳಂದೂರು: ರಾಜ್ಯದ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲ ಆಸ್ತಿಗಳಿಗೆ ಮೂರು ತಿಂಗಳ ಒಳಗೆ ಇ-ಖಾತೆ ನೀಡಲು ಪೌರಾಡಳಿತ ಇಲಾಖೆ ಸಿದ್ಧತೆ ನಡೆಸಿದ್ದು ಈ ಸಂಬಂಧ ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚೆಗೆ ಇ-ಖಾತೆ ಅಭಿಯಾನ ಸಭೆ ಆಯೋಜಿಸಲಾಗಿತ್ತು.

ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾತನಾಡಿ, 2025ರ ಮೇ 10 ರೊಳಗೆ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತೆ ನೀಡಲು ಅಭಿಯಾನ ನಡೆಸುವಂತೆ ಸೂಚನೆ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆ ಪಡೆಯಲು ಬೇಕಾದ ದಾಖಲೆಗಳನ್ನು ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಲಾಗುವುದು ಎಂದು ಹೇಳಿದರು.

ಎ ರಿಜಿಸ್ಟರ್ ಹಾಗೂ ಬಿ ರಿಜಿಸ್ಟರ್‌ನಲ್ಲಿ ಆಸ್ತಿಗಳಿಗೆ ಇ-ಖಾತೆ ನೀಡಲಾಗುವುದು. ಇದಕ್ಕೆ ಪ್ರತ್ಯೇಕ ನಿಯಮಗಳಿದ್ದು ಪಟ್ಟಣ ಪಂಚಾಯಿತಿಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು. ಎ ರಿಜಿಸ್ಟರ್‌ನಲ್ಲಿ ಗ್ರಾಮಠಾಣಾ, ಸರ್ಕಾರ ಅಥವಾ ಸರ್ಕಾರದ ನಿಗಮ, ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಕಂದಾಯ ಇಲಾಖೆಯಿಂದ 94ಸಿಸಿ ಅಡಿ ನೀಡಲಾದ ಹಕ್ಕು ಪತ್ರಗಳು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಸ್ವತ್ತುಗಳು, ಬಿ ರಿಜಿಸ್ಟರ್‌ನಲ್ಲಿ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಗಳಲ್ಲಿನ ನಿವೇಶನಗಳು/ ಕಟ್ಟಡಗಳು, ಭೂ ಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳನ್ನು ಇ-ಖಾತೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಹಾಗಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯೊಳಗೆ ಬರುವ ಕಟ್ಟಡಗಳ ಮತ್ತು ನಿವೇಶನಗಳ ಮಾಲೀಕರು ಆಸ್ತಿಗಳಿಗೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಒದಗಿಸಿ, ಸ್ವತ್ತುಗಳಿಗೆ ಸಂಬಂಧಪಟ್ಟ ಬಾಕಿ, ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿ ಆಸ್ತಿಗಳನ್ನು ಗಣಕೀಕರಣಗೊಳಿಸಿಕೊಂಡು ನಮೂನೆ-03 ಮತ್ತು ನಮೂನೆ 3ಎ ಗಳನ್ನು ನಿಗದಿತ ಅವಧಿಯೊಳಗೆ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಪಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಮಹೇಶ್, ಮಹದೇವನಾಯಕ, ಮಂಜು ನಾಮನಿರ್ದೇಶಿತ ಸದಸ್ಯರಾದ ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಸಿಬ್ಬಂದಿ ಸುರೇಶ್, ಮಂಜುನಾಥ್, ಜಯಲಕ್ಷ್ಮೀ, ಮಲ್ಲಿಕಾರ್ಜುನ, ಮಹೇಶ್ ಇತರರು ಇದ್ದರು.