ಬಿಜೆಪಿ ಜಿಲ್ಲಾ ಕಚೇರಿ ಏರ್ಪಡಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ಬಿ.ಎಲ್.ಸಂತೋಷ್, ಬಿ.ವೈ.ವಿಜಯೇಂದ್ರ, ಟಿ.ಡಿ.ಮೇಘರಾಜ್, ಆರ್.ಕೆ.ಸಿದ್ದರಾಮಣ್ಣ, ಎಂ.ಬಿ.ಭಾನುಪ್ರಕಾಶ್ ಉಪಸ್ಥಿತರಿದ್ದರು. 
ಜಿಲ್ಲೆ

ಬಿಜೆಪಿ ಪ್ರಚಾರದ ರೂಪುರೇಷೆ ಸಿದ್ಧತೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಬುಧವಾರ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆದಿದೆ. ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದು ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.

ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಪ್ರಚಾರ ಸಭೆಗಳು, ಅದಕ್ಕೆ ಮತದಾರರ ಸ್ಪಂದನೆ, ಮೋದಿ ಅಲೆ, ಕೇಂದ್ರ ಸರ್ಕಾರ ಆಡಳಿತದ ಬಗ್ಗೆ ಜನರ ನಾಡಿಮಿಡಿತ ಹೇಗಿದೆ ಎಂಬ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಯಾವ ಪ್ರಮುಖ ನಾಯಕರನ್ನು ಕರೆಯಿಸಬೇಕು, ಯಾರ ಪ್ರಚಾರದಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಯಿತು.
ಪ್ರಚಾರ ಕಣದಲ್ಲಿನ ಪ್ಲಸ್ ಹಾಗೂ ಮೈನಸ್ ಅಂಶಗಳ ಬಗ್ಗೆಯೂ ಪ್ರಮುಖರು ಪ್ರಸ್ತಾಪಿಸಿದರು. ಎದುರಾಳಿಗಳ ಪ್ರಚಾರ ತಂತ್ರಕ್ಕೆ ಪ್ರತಿಯಾಗಿ ಯಾವ ರಣತಂತ್ರ ಹೆಣೆಯಬೇಕು? ಅದೃಶ್ಯ ಮತದಾರರು ಎನಿಸಿಕೊಂಡಿರುವ ಸಣ್ಣ ಸಮುದಾಯಗಳ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ಕೆ ನಿರ್ದಿಷ್ಟ ಸ್ವರೂಪ ನೀಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಚುನಾವಣಾ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ, ಕ್ಲಸ್ಟರ್ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.