ತೇರದಾಳ: ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸಂದರ್ಶನ ಮಾಡುವುದು ಕಷ್ಟದ ಕೆಲಸ. ಅಂತಹ ಬಹುದೊಡ್ಡ ಜವಾಬ್ದಾರಿಯನ್ನು ದಾನಿಗೊಂಡ ಸಂಸ್ಥೆ ನಿರ್ವಹಿಸುತ್ತಿರುವುದು ನಮ್ಮ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಸ್ಥೆಗಳ ಹೆಗ್ಗಳಿಕೆಗೆ ಈ ಸಂಸ್ಥೆ ಸಾಕ್ಷಿಯಾಗಿದೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯ ಕುಲಪತಿ ದಯಾನಂದ ಸಾಹುಕಾರ ಹೇಳಿದರು.
ಪಟ್ಟಣದ ಪ್ರತಿಷ್ಠಿತ ದಾನಿಗೊಂಡ ವಿದ್ಯಾಸಂಸ್ಥೆಯ ದಾನಿಗೊಂಡ ಕಾಲೇಜ್ ಆಫ್ ಕಾಮರ್ಸ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಜಾಬ್ ಫೇರ್- 2024 ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಇಂತಹ ವೇಳೆ ಅಭ್ಯರ್ಥಿಗಳು ಕೈಗಾರಿಕೆ ಆಧಾರಿತ ತರಬೇತಿಯೊಂದಿಗೆ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಬೆಳಗಾವಿಯ ಪ್ರೋಪಿಷಿಯನ್ ಮೈಂಡ್ ಸಂಸ್ಥಾಪಕ ಸುಹಾಸ ರಜಪೂತ, ಪ್ರಸ್ತುತ ಸಂದರ್ಶನ ಸಂದರ್ಭ ಕೌಶಲಾಧಾರಿತ ಅಭ್ಯರ್ಥಿಗಳ ಅವಶ್ಯಕತೆ ಬಹಳಷ್ಟಿದೆ. ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಇನ್ನಿತರೆಡೆಗಳಿಂದ ಎಚ್‌ಆರ್‌ಗಳು ಇಲ್ಲಿ ಬಂದಿದ್ದು, ಎಷ್ಟು ಸಂಖ್ಯೆಯಲ್ಲಿ ಉತ್ತಮ ಅಭ್ಯರ್ಥಿಗಳು ಸಿಗುತ್ತಾರೆ ಎಂಬುದು ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ನೋಂದಾಯಿತ ಅಭ್ಯರ್ಥಿ ಮತ್ತು ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು, ತಮ್ಮ ಉದ್ಯೋಗ ನಿರೀಕ್ಷೆಗೆ ನಾವು ಪೂರಕವಾಗಿರುತ್ತೇವೆ ಎಂದರು.
ಸಂಸ್ಥೆ ಚೇರ್ಮನ್ ಡಾ. ಎಂ.ಎಸ್. ದಾನಿಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ಕು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಕೊರತೆಯಲ್ಲಿರುವ ಆಂಗ್ಲ ಭಾಷೆ, ಕಂಪ್ಯೂಟರ್ ಜ್ಞಾನ ಸೇರಿ ತಾಂತ್ರಿಕ ಜಗತ್ತಿನ ಕೌಶಲಾಧಾರಿತ ಅನುಭವವನ್ನು ಸಂಸ್ಥೆ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ನಿರಂತರ ಶ್ರಮ ವಹಿಸಲಾಗುತ್ತಿದೆ. ದೇಶದಲ್ಲಿ ಪ್ರತಿಭಾವಂತರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಹಾಗೆಯೇ ಬಿಕಾಂ ಕ್ಷೇತ್ರದ ವಿದ್ಯಾರ್ಥಿಗಳಿಗೆ ದೇಶದಲ್ಲಿ ವಿಪುಲ ಅವಕಾಶಗಳಿವೆ. ಎತ್ತರದ ಕನಸುಗಳನ್ನು ಇಟ್ಟುಕೊಂಡು ತಮ್ಮ ಗುರಿ ಸಾಧನೆ ಮಾಡುವ ಮೂಲಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಬಾಗಲಕೋಟೆಯ ವಿಶ್ವವಿದ್ಯಾಲಯವು ಜಮಖಂಡಿಯಲ್ಲಿ ಸ್ಥಾಪಿತವಾಗಿರುವುದು ಈ ಭಾಗದ ಹೆಮ್ಮೆಯಾಗಿದೆ. ವಿಶ್ವವಿದ್ಯಾಲಯವು ಇಂಥ ಯಾವುದೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ನಮ್ಮ ಸಂಸ್ಥೆಯು ಬೆಂಬಲಿಸುತ್ತದೆ ಎಂದರು.
ಪ್ರಾಚಾರ್ಯ ಸಂತೋಷ ಕೃಷ್ಣಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದರ್ಶನಕ್ಕಾಗಿ ಎಂಟು ವಿಭಾಗಗಳನ್ನು ಮಾಡಲಾಗಿದ್ದು, 300ಕ್ಕೂ ಅಧಿಕ ವಿದ್ಯಾರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು.