ಜಿಲ್ಲೆ

ಅಯೋಧ್ಯೆಯ ರಥಕ್ಕೆ ಕುಂದಾಪುರದ ಕೋಟೇಶ್ವರದಲ್ಲಿ ಸಿದ್ಧತೆ; ಮೇ 14ರಂದು ಮುಹೂರ್ತ, 84 ಅಡಿ ಎತ್ತರ, 26 ಅಡಿ ಅಗಲ

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣವಾಗುವ ಹೊತ್ತಿಗೆ, ಇತ್ತ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶ್ರೀ ರಾಮನಿಗಾಗಿ ಜಗತ್ತಿನಲ್ಲೇ ಅತಿ ಎತ್ತರದ ಭವ್ಯ ಬ್ರಹ್ಮರಥವೂ ಸಿದ್ಧಗೊಳ್ಳಲಿದೆ. ಮೇ 14 ಅಕ್ಷಯ ತದಿಗೆಯಂದು ಬೃಹತ್ ರಥ ನಿರ್ವಣಕ್ಕೆ ಮುಹೂರ್ತ ನೆರವೇರಿಸಲು ತಯಾರಿ ನಡೆದಿದ್ದು, ಎರಡೂವರೆ ವರ್ಷದ ಅವಧಿಯಲ್ಲಿ ಕೆಲಸ ಪೂರ್ಣವಾಗಲಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ, ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ಮೀನಾರಾಯಣ ಆಚಾರ್ಯ ಇದರ ನಿರ್ವತೃ. ರಥ ನಿರ್ವಣಕ್ಕಾಗಿ ಕುಂಭಾಶಿಯಲ್ಲಿ ವಿಶಾಲ ಶೆಡ್ ಕಟ್ಟಲಾಗುತ್ತಿದೆ. ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮರಥದ ಮಾದರಿಯಲ್ಲಿ ದಕ್ಷಿಣ ಭಾರತ ಶೈಲಿಯ ರಥ ರಾಮನಿಗೆ ಅರ್ಪಣೆಯಾಗಲಿದೆ. ಜಗತ್ತಿನಲ್ಲೇ ಅತಿ ಎತ್ತರವಾಗಿರುವ ಬ್ರಹ್ಮರಥವಿದು. 10 ಅಡಿಗಳ ಚಕ್ರ, 20 ಅಡಿ ಜಿಡ್ಡೆ, ಪೀಠ 8 ಅಡಿ, ಪತಾಕೆ ಭಾಗ 36 ಅಡಿ, ಮಂಟಪ ಭಾಗ 5 ಅಡಿ, ಕಲಶ ಭಾಗ 5 ಅಡಿ ಸಹಿತ ರಥದ ಒಟ್ಟು ಎತ್ತರ 84 ಅಡಿ ಹಾಗೂ ಅಗಲ 26 ಅಡಿ. ರಥಕ್ಕೆ ಉತ್ತರಾಖಂಡದ ಸಾಗುವಾನಿ, ಚಕ್ರಕ್ಕೆ ಕರಾವಳಿ ಬೋಗಿ ಮರ ಬಳಸಲಾಗುತ್ತದೆ.

ಒಟ್ಟು 60 ಟನ್ ಮರ ಬೇಕಿದ್ದು, ರಥದ ಭಾರವೇ 50 ಟನ್ ಇರಲಿದೆ. ರಥದ ಸುತ್ತ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಅಪೂರ್ವ ಕೆತ್ತನೆಗಳಿರುತ್ತದೆ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣವಾಗುವ ರಥದ ಕಾರ್ಯದಲ್ಲಿ ಶಿಲ್ಪಿಗಳ ಸಹಿತ ಸುಮಾರು 50 ಮಂದಿ ಶ್ರಮವಹಿಸಲಿದ್ದಾರೆ.

ಪಾದುಕೆ ಪ್ರತಿಷ್ಠಾಪನೆ: ರಥದ ಕೆಲಸ, ಭದ್ರತೆ ದೃಷ್ಟಿಯಲ್ಲಿರಿಸಿ ಕುಂಭಾಶಿಯಲ್ಲಿ ಒಂದು ಎಕರೆ ಸ್ಥಳದಲ್ಲಿ ಶೆಡ್ ನಿರ್ಮಾಣ ಕೆಲಸ ಭರದಿಂದ ನಡೆಯುತ್ತಿದೆ. ರಥ ನಿರ್ಮಾಣ ಹಿನ್ನೆಲೆಯಲ್ಲಿ ಮೂರು ಪಾದುಕೆಗಳ ಪೂಜೆ ಮಾಡಿದ್ದು, ಅದರಲ್ಲಿ ಒಂದು ಪಾದುಕೆಯನ್ನು ರಥ ನಿರ್ವಣವಾಗುವ ಕುಂಭಾಶಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾಹಿತಿ ನೀಡಿದ್ದಾರೆ. ‘ರಥ ನಿರ್ಮಾಣ ಕಷ್ಟದ ಕೆಲಸ. ಅಯೋಧ್ಯೆ ಎನ್ನುವ ಭಕ್ತಿ ಮತ್ತು ಗೌರವ ಭಾವದಿಂದ ರಥ ನಿರ್ವಣಕ್ಕೆ ಮುಂದಾಗಿದ್ದೇವೆ. ಅಯೋಧ್ಯೆ ದೇವರ ಬಾಲಾಲಯದಲ್ಲಿ ಮೂರು ಪಾದುಕೆ ಇಟ್ಟು ಪೂಜೆ ಮಾಡಿಕೊಟ್ಟಿದ್ದು, ಅದರಲ್ಲಿ ಒಂದು ಪಾದುಕೆ ಕಿಷ್ಕಿಂಧೆಗೆ, ಮತ್ತೊಂದು ಪಾದುಕೆ ಗುರುಗಳ ಜತೆ ಪರ್ಯಟನೆಗೆ ಹೋಗುತ್ತಿದ್ದು, ಒಂದು ಪಾದುಕೆಯನ್ನು ನಮಗೆ ಕೊಟ್ಟಿದ್ದಾರೆ. ಅದನ್ನು ಶೆಡ್​ನಲ್ಲಿ ಪ್ರತಿಷ್ಠಾಪನೆ ಮಾಡಿ ಕೆಲಸ ಮಾಡುತ್ತೇವೆ. ಭರತನು ರಾಮನ ಪಾದುಕೆಯನ್ನು ಸಿಂಹಾಸನದಲ್ಲಿಟ್ಟು ಅಯೋಧ್ಯೆಯಲ್ಲಿ ಆಳ್ವಿಕೆ ನಡೆಸಿದ್ದು, ಪಾದುಕೆ ನಮ್ಮಲ್ಲಿ ಇರುವುದರಿಂದ ರಾಮನೇ ಇಲ್ಲಿದ್ದಾನೆ ಎನ್ನುವ ಭಾವನೆಯಲ್ಲಿ ರಥ ನಿರ್ವಿುಸುತ್ತೇವೆ. ಶೆಡ್​ಗೆ ಅಯೋಧ್ಯೆ ಎಂದೇ ನಾಮಕರಣ ಮಾಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಬಿಡಿಭಾಗ ಸಾಗಾಟ ಸಾಧ್ಯತೆ: ಉಡುಪಿಯಿಂದ ಅಯೋಧ್ಯೆಗೆ ಸುಮಾರು 2,000 ಕಿ.ಮೀ. ದೂರವಿದೆ. ರಸ್ತೆ ಮಾರ್ಗದಲ್ಲಿ ಸಾಗುವ ಹಾದಿಯಲ್ಲಿ ಟೋಲ್​ಗೇಟ್, ವಿದ್ಯುತ್ ತಂತಿಗಳಿರುವುದು ಹಾಗೂ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗುವುದು ಸಾಗಾಟಕ್ಕೆ ದೊಡ್ಡ ಸವಾಲು. ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಾದರೆ ನಿವಾರಿಸಿಕೊಂಡು ರಥ ಸಾಗಿಸಬಹುದು. ಸಾಧ್ಯವಾಗದಿದ್ದರೆ ಬಿಡಿಭಾಗಗಳನ್ನು ಅಯೋಧ್ಯೆಗೆ ಸಾಗಿಸಿ, ಅಲ್ಲೇ ರಥ ಬಿಗಿಯುವ ಕೆಲಸ ಮಾಡಬೇಕಾಗುತ್ತದೆ. ಈಗಿನ ಲೆಕ್ಕಾಚಾರಗಳ ಪ್ರಕಾರ ಅಯೋಧ್ಯೆಯಲ್ಲೇ ರಥ ಕಟ್ಟುವ ಸಾಧ್ಯತೆ ಹೆಚ್ಚು.

ನಮ್ಮ ಪೂರ್ವಿಕರ ಪುಣ್ಯದ ಫಲವಾಗಿ ಅಯೋಧ್ಯಾ ರಾಮನಿಗೆ ರಥ ನಿರ್ಮಾಣ ಅವಕಾಶ ಸಿಕ್ಕಿದೆ. ಕಳೆದ ವರ್ಷ ಸುಬ್ರಹ್ಮಣ್ಯಕ್ಕೆ ಮಾಡಿಕೊಟ್ಟ ಬ್ರಹ್ಮರಥ ಮಾದರಿಯಲ್ಲೇ ಈ ರಥವೂ ಇರಲಿದೆ. ರಥ ನಿರ್ವಣಕ್ಕೆ ಎರಡೂವರೆ ವರ್ಷದ ಅವಕಾಶ ಕೊಟ್ಟಿದ್ದು, ಅಯೋಧ್ಯೆಯಲ್ಲಿ ಮಂದಿರ ಆಗುವುದಕ್ಕೂ ರಥ ಕೆಲಸ ಪೂರ್ಣವಾಗುವುದಕ್ಕೂ ಸರಿ ಹೋಗಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ನೀಡುತ್ತಿದ್ದಾರೆ. | ಲಕ್ಷ್ಮೀನಾರಾಯಣ ಆಚಾರ್ಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ