ಜಿಲ್ಲೆ

20ರಿಂದ ತುಂಗಭದ್ರಾ ಪುಷ್ಕರ, ಸಿದ್ಧತೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ರಾಯಚೂರು: ತುಂಗಭದ್ರಾ ನದಿ ತೀರಲ್ಲಿ ನ.20 ರಿಂದ ಡಿ.1ರವರೆಗೆ ನಡೆಯಲಿರುವ ತುಂಗಭದ್ರಾ ಪುಷ್ಕರಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ಮಂತ್ರಾಲಯದ ಶ್ರೀಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ನದಿಗೆ 12 ವರ್ಷಗಳಿಗೊಮ್ಮೆ ಬರುವ ಪುಷ್ಕರ ಆಚರಣೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಆಂಧ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪುಷ್ಕರದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಮಂತ್ರಾಲಯದ ತುಂಗಭದ್ರಾ ನದಿ ತೀರದಲ್ಲಿ ಐದು ಕಡೆ ಸ್ನಾನಘಟ್ಟಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಸೋಂಕು ಹರಡದಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ನ.20ರ ಬೆಳಗ್ಗೆ 6ಕ್ಕೆ ಶ್ರೀಮಠದಿಂದ ತುಂಗಭದ್ರಾ ನದಿ ತೀರದಲ್ಲಿ ಉತ್ಸವರಾಯರ ಮೂರ್ತಿಯೊಂದಿಗೆ ತೆರಳಿ ಪೂಜೆ ಸಲ್ಲಿಸಲಾಗುತ್ತಿದೆ. ನಂತರದಲ್ಲಿ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ನದಿ ತೀರಕ್ಕೆ ಆಗಮಿಸುವವರಿಗೆ ಕೋವಿಡ್ ಮಾರ್ಗಸೂಚಿ ಅನುಸರಿಸುವಂತೆ ಸೂಚನೆ ನೀಡಲಾಗುತ್ತಿದೆ. ಶ್ರೀಮಠಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದರೂ ನೆರವು ನೀಡುವಂತೆ ಯಾವುದೇ ಸರ್ಕಾರಕ್ಕೂ ಮನವಿ ಮಾಡುವುದಿಲ್ಲ. ರಾಯರ ಮಠ ಭಕ್ತರ ಆಸ್ತಿಯಿದ್ದಂತೆ, ಭಕ್ತರು ಶ್ರೀಮಠಕ್ಕೆ ಉದಾರತೆ ತೋರುವ ಮೂಲಕ ಆರ್ಥಿಕ ಚೇತರಿಕೆಗೆ ಕಾರಣರಾಗಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ಈ ಸಂದರ್ಭ ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ, ಅಧಿಕಾರಿಗಳಾದ ಮಾಧವಶೆಟ್ಟಿ, ಶ್ರೀಪತಿ ಉಪಸ್ಥಿತರಿದ್ದರು.

ಶಾಲೆಗಳನ್ನು ತರಾತುರಿಯಲ್ಲಿ ಆರಂಭಿಸಿದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದ್ದರೂ ತಜ್ಞರು ಹಾಗೂ ವೈದ್ಯರು ಸೋಂಕು ಮರುಕಳಿಸುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. | ಶ್ರೀ ಸುಬುಧೇಂದ್ರ ತೀರ್ಥರು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ