ಜಿಲ್ಲೆ

ಯಳಂದೂರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

ಪ್ರಸಿನ್ ಕೆ.ಆರ್

ಯಳಂದೂರು: ಮಾ.21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಇದಕ್ಕಾಗಿ ತಾಲೂಕಿನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಬಾರಿ ತಾಲೂಕಿನಲ್ಲಿ 997 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 491 ಪುರುಷ ಹಾಗೂ 506 ಹೆಣ್ಣು ಮಕ್ಕಳಿದ್ದಾರೆ. ಇವರೊಂದಿಗೆ 10 ಗಂಡು ಹಾಗೂ 9 ಹೆಣ್ಣು ಒಟ್ಟು 19 ಜನ ಅಂಗವಿಕಲ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ.

ತಾಲೂಕಿನಲ್ಲಿ ಪರೀಕ್ಷೆಗಾಗಿ ಕೊಠಡಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆ, ಜೆಎಸ್‌ಎಸ್ ಪ್ರೌಢಶಾಲೆ, ತಾಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯ, ಮದ್ದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯೂ ಸೇರಿದಂತೆ ನಾಲ್ಕು ಕಡೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ಕೊಠಡಿಯಲ್ಲೂ ಈ ಬಾರಿ ಎಐ ತಂತ್ರಜ್ಞಾನದಡಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ಕೊಠಡಿಯಲ್ಲೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ತೊಂದರೆಯಾದಲ್ಲಿ ಪರ್ಯಾಯವಾಗಿ ಯುಪಿಎಸ್‌ಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಸ್ಥಾನಿಕ ಜಾಗೃತ ದಳಗಳು ತಾಲೂಕಿನಲ್ಲಿ ಸಂಚರಿಸಿ ಪರೀಕ್ಷಾ ಕರ್ತವ್ಯವನ್ನು ನಿರ್ವಹಿಸಲಿವೆ. ವಿದ್ಯಾರ್ಥಿಗಳು ತರುವ ಮೊಬೈಲ್‌ಗಳನ್ನು ಸಂಗ್ರಹಿಸಿ ಇಡಲು ಈ ಬಾರಿ ಒಬ್ಬರನ್ನು ನೇಮಕ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಪರೀಕ್ಷೆಗಳು ನಡೆಯಲಿವೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತೋರಿಸಿದ್ದಲ್ಲಿ ಅವರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಂಜುಂಡಯ್ಯ ಮಾಹಿತಿ ನೀಡಿದರು.