ಜಿಲ್ಲೆ

ರಾಮನಗರದಲ್ಲಿ 700 ಎಕರೆ ಪ್ರದೇಶದಲ್ಲಿ ಸೋಲಾರ್​ ವಿದ್ಯುತ್​ ಉತ್ಪಾದನೆಗೆ ಸಿದ್ಧತೆ

 ಗಂಗಾಧರ್​ ಬೈರಾಪಟ್ಟಣ ರಾಮನಗರ

ವಿದ್ಯುತ್​ ಕಣ್ಣಾಮುಚ್ಚಾಲೆ ಒಂದೆಡೆ ರೈತರಿಗೆ ಸಂಕಷ್ಟ ತಂದೊಡ್ಡಿದ್ದರೆ, ಅತ್ತ ಎಸ್ಕಾಂ ಅಧಿಕಾರಿಗಳು ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬೆಸ್ಕಾಂ ಈಗ ರಾಮನಗರದಲ್ಲಿ ಸುಮಾರು 700 ಎಕರೆ ಪ್ರದೇಶದಲ್ಲಿ ಸೋಲಾರ್​ ವಿದ್ಯುತ್​ ಉತ್ಪಾದನೆ ಮಾಡಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್​ ಸಹ ಕರೆದಿದೆ.

ಮಳೆ ಕೊರತೆಯಿಂದ ವಿದ್ಯುತ್​ ಜಲಾಗಾರಗಳಲ್ಲಿ ಉತ್ಪಾದನೆಯನ್ನು ಕುಂಠಿತಗೊಳಿಸಿದ್ದರೆ ಗೃಹ ಮತ್ತು ಪಂಪ್​ಸೆಟ್​ ವಿದ್ಯುತ್​ ಬೇಡಿಕೆಯನ್ನು ಹೆಚ್ಚಿಸಿದೆ. ಇದರ ನಡುವೆ ರೈತರಿಗೆ ಕೊಡಲಾಗುತ್ತಿದ್ದ 7 ತಾಸು ವಿದ್ಯುತ್​ ಅನ್ನು ಕೇವಲ 2 ಗಂಟೆಗೆ ಇಳಿಸುವ ಮೂಲಕ ರೈತರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸೋಲಾರ್​ ವಿದ್ಯುತ್​ ಉತ್ಪಾದನೆ ಮೊರೆ ಹೋಗಿದ್ದು, ಪ್ರಸ್ತುತ ಇರುವ ವಿದ್ಯುತ್​ ಕೊರತೆ ಸರಿದೂಗಿಸುವ ಕೆಲಸಕ್ಕೆ ಕೈ ಹಾಕಿದೆ.

ಟೆಂಡರ್​ಗೆ ಚಾಲನೆ

ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ತಮ್ಮ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಸೋಲಾರ್​ ವಿದ್ಯುತ್​ ಉತ್ಪಾದನೆ ಮೂಲಕ ಸ್ವಾವಲಂಬಿಯಾಗಲು ಟೆಂಡರ್​ ಆಹ್ವಾನಿಸಿದೆ. ಜಿಲ್ಲೆಯಲ್ಲಿಯೂ 700 ಎಕರೆ ಕಂದಾಯ ಭೂಮಿಯಲ್ಲಿ ಸೋಲಾರ್​ ಅಳವಡಿಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್​ ಉತ್ಪಾದನೆ ಮಾಡುತ್ತಿವೆ. ಜತೆಗೆ ಬೆಸ್ಕಾಂ ಸ್ವಯಂ ಉತ್ಪಾದನೆಗೆ ಮುಂದಾದರೆ ಕೊರತೆ ನೀಗಿಸಲು ಸಹಕಾರಿಯಾಗಿದೆ.

ಎಷ್ಟು ಕೊರತೆ?

ಜಿಲ್ಲೆಯಲ್ಲಿ ಸುಮಾರು 90 ಸಾವಿರ ಕೃಷಿ ಪಂಪ್​ ಸೆಟ್​ಗಳಿದ್ದು, ಇವುಗಳಿಗೆ ಪ್ರತಿ ದಿನ 600 ಮೆಗಾ ವಾಟ್​ ವಿದ್ಯುತ್​ನ ಅಗತ್ಯವಿದೆ. ಆದರೆ ರಾಜ್ಯದಲ್ಲಿಯೇ ವಿದ್ಯುತ್​ ಉತ್ಪಾದನೆ ಕುಸಿದ ಕಾರಣ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ 150 ಮೆಗಾವಾಟ್​ ವಿದ್ಯುತ್​ ಕೊರತೆ ಎದುರಾಗಿದೆ. 700 ಎಕರೆ ಪ್ರದೇಶದಲ್ಲಿ ಸೋಲಾರ್​ ವಿದ್ಯುತ್​ ಉತ್ಪಾದನಾ ಟಕ ಆರಂಭಗೊಂಡರೆ ಇದರಿಂದ ಸುಮಾರು 140 ಮೆ.ವಾಟ್​ ದೊರೆಯಲಿದ್ದು, ಇದನ್ನು ರೈತರ ಕೃಷಿ ಪಂಪ್​ಸೆಟ್​ಗಳಿಗೆ ಬಳಕೆ ಮಾಡುವ ಚಿಂತನೆಯೂ ಇದೆ.

ರೈತರಿಗೆ ಅನುಕೂಲ?

ಈ ಯೋಜನೆ ಜಿಲ್ಲೆಯಲ್ಲಿ ಕಾರ್ಯಗತಗೊಂಡರೆ ರೈತರು ಪ್ರಸ್ತುತ ಎದುರಿಸುತ್ತಿರುವ ತೊಂದರೆಗೆ ಮುಕ್ತಿ ದೊರೆಯಲಿದೆ. ಗುಣಮಟ್ಟದ ವಿದ್ಯುತ್​ ಪೂರೈಕೆಗೆ ಎಚ್​ವಿಡಿಎಸ್​ ಟಿಸಿಗಳು ಸಹಕಾರಿಯಾಗಿದ್ದರೂ, ಪೂರೈಕೆಯಲ್ಲಿಯೇ ಕೊರತೆ ಇರುವ ಕಾರಣ, ರಾತ್ರಿ ವೇಳೆ ರೈತರು ವಿಷ ಜಂತುಗಳು ಹಾಗೂ ಕಾಡು ಪ್ರಾಣಿಗಳ ದಾಳಿಗಳ ಭಯದಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ಯೋಜನೆ ಜಾರಿಯಿಂದ ಹಗಲು ವೇಳೆಯಲ್ಲಿ ಗುಣಮಟ್ಟದ ವಿದ್ಯುತ್​ ಪೂರೈಕೆಗೆ ಸಹಕಾರಿಯಾಗಲಿದೆ.

ಪಂಪ್​ಸೆಟ್​ಗಳಿಗೆ ಸೋಲಾರ್​

ಈಗಾಗಲೇ ಪಂಪ್​ಸೆಟ್​ಗಳಿಗೆ ಆನ್​ ಗ್ರಿಡ್​ನಿಂದ ವಿದ್ಯುತ್​ ಪೂರೈಕೆ ಸ್ಥಗಿತಗೊಳಿಸಿರುವ ಸರ್ಕಾರ ಸ್ಟಾಂಡ್​ ಅಲೋನ್​ / ಆಫ್​ ಗ್ರಿಡ್​ ಯೋಜನೆ ಮೂಲಕ ಪ್ರತಿ ಪಂಪ್​ಸೆಟ್​ಗಳನ್ನು ಸೋಲಾರಿಕರಣಗೊಳಿಸಲು ಆದೇಶಿಸಿದೆ.

ಈಗಾಗಲೇ ಆನ್​ ಗ್ರಿಡ್​ನ ಪೂರೈಕೆಯ ಕೊನೇ ಹಂತದಿಂದ ಕೇವಲ 500 ಮೀಟರ್​ ವ್ಯಾಪ್ತಿಯಲ್ಲಿ ವಿದ್ಯುತ್​ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ ರೈತರ ಪಂಪ್​ಸೆಟ್​ಗೆ ಸಂಪರ್ಕ ನೀಡಲಿದೆ. ಒಂದು ವೇಳೆ 500 ಮೀಟರ್​ ಮೀರಿದರೆ ಅಂತದ ಪಂಪ್​ಸೆಟ್​ಗಳಿಗೆ ಆಫ್​ ಗ್ರಿಡ್​ ಸೋಲಾರ್​ ಹಾಕಿಸಿಕೊಂಡು ಸಂಪರ್ಕ ಪಡೆಯಬಹುದಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟಾರೆಯಾಗಿ ಶೇ.80 ಸಬ್ಸಿಡಿ ಸಹ ದೊರೆಯಲಿದೆ.

ರಾಮನಗರದಿಂದ ಸೋಲಾರ್​ ಪ್ಲಾಂಟ್​ ನಿರ್ಮಾಣ ಮಾಡಿ ವಿದ್ಯುತ್​ ಉತ್ಪಾದನೆಗೆ ಬೆಸ್ಕಾಂನಿಂದ ಟೆಂಡರ್​ ಕರೆಯಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ.  ನಾಗರಾಜು, ಇಇ ಬೆಸ್ಕಾಂ, ರಾಮನಗರ ವಿಭಾಗ