ಗದಗ: ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಿಸುವುದರ ಜತೆಗೆ ಮುಕ್ತ, ನಿಷ್ಪಕ್ಷಪಾತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ತಿಳಿಸಿದ್ದಾರೆ.
ಚುನಾವಣೆ ಆಯೋಗದ ನಿರ್ದೇಶನದಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಅ.28ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಅಲ್ಲದೆ, ಗುಂಪುಗೂಡುವಿಕೆಯನ್ನು ತಡೆಗಟ್ಟಲು ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಮತದಾರರಿಗೆ ಅಡಚಣೆ ಆಗಬಾರದೆಂಬ ಕಾರಣಕ್ಕೆ ಮತದಾನದಂದು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂತೆ, ಜಾತ್ರೆ ಅಥವಾ ಉತ್ಸವಗಳನ್ನು ರದ್ದುಪಡಿಸಲಾಗಿದೆ.
ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಮತಗಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾನದ ಸಂದರ್ಭದಲ್ಲಿ ಅನಾವಶ್ಯಕ ದೂರುಗಳಿಗೆ ಅಸ್ಪದ ಆಗದಂತೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಮತಗಟ್ಟೆಗಳಲ್ಲಿ ಕೋವಿಡ್ ಮುಕ್ತ ವಾತಾವರಣ ನಿರ್ವಿುಸಲಾಗಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬಹುದು. ಕರೊನಾ ಬಗ್ಗೆ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಮತದಾನ ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು.
ಚುನಾವಣೆ ಯಶಸ್ವಿಗಾಗಿ ಪಿಆರ್ಒ, ಎಪಿಆಆರ್ಒ ಮತ್ತು ಎಂಒ ಸೇರಿ ಜಿಲ್ಲೆಯಲ್ಲಿ ಒಟ್ಟು 185 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ 9 ಜನ ಸೆಕ್ಟರ್ ಅಧಿಕಾರಿಗಳು, ತಾಲೂಕಿಗೊಂದರಂತೆ 7 ಪ್ಲೈಯಿಂಗ್ ಸ್ಕಾ್ವಡ್ ರಚಿಸಲಾಗಿದ್ದು, 21 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಎಸ್ಟಿಯಲ್ಲಿ 7 ಹಾಗೂ ವಿವಿಟಿಯಲ್ಲಿ 14 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕುವಾರು ಮತದಾರರ ವಿವರ
ಜಿಲ್ಲಾದ್ಯಂತ ಒಟ್ಟು 29 ಮತಗಟ್ಟೆಗಳಿವೆ. ಗದಗ 7711, ಮುಂಡರಗಿ 1318, ನರಗುಂದ 1176, ರೋಣ 1512, ಗಜೇಂದ್ರಗಡ 2122, ಶಿರಹಟ್ಟಿ 1063 ಹಾಗೂ ಲಕ್ಷ್ಮೇಶ್ವರ 1076 ಸೇರಿ ಪುರುಷರು 10,979, ಮಹಿಳೆಯರು 4,998 ಸೇರಿದಂತೆ ಒಟ್ಟು 15,978 ಮತದಾರರಿದ್ದಾರೆ.
ಮತಗಟ್ಟೆ ವಿವರ
* ಗದಗ-ಬೆಟಗೇರಿ ನಗರದ ಮುನ್ಸಿಪಲ್ ಜೂ.ಕಾಲೇಜ್, ಜೆ.ಸಿ.ಪ್ರೌಢಶಾಲೆ, ತಹಸೀಲ್ದಾರ್ ಕಚೇರಿ. ಗದಗ ತಾಲೂಕಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ಕೋಟುಮಚಗಿ, ಸರ್ಕಾರಕ್ಕೆ ಕನ್ನಡ ಗಂಡು ಮಕ್ಕಳ ಶಾಲೆ ಲಕ್ಕುಂಡಿ, ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹುಲಕೋಟಿ, ಪಟ್ಟಣ ಪಂಚಾಯಿತಿ ಮುಳಗುಂದ.
* ಮುಂಡರಗಿ ನಗರದ ತಹಸೀಲ್ದಾರ್ ಕಚೇರಿ ಮತ್ತು ಪಡಸಾಲೆ. ನರಗುಂದ ಪಟ್ಟಣದ ತಹಸೀಲ್ದಾರ್ ಕಚೇರಿ, ನರಗುಂದ ತಾಲೂಕಿನ ಗ್ರಾಮ ಪಂಚಾಯತಿ ಸಭಾಭವನ ಕೊಣ್ಣೂರು. ರೋಣ ಪಟ್ಟಣದ ಹಳೇ ತಾಲೂಕು ಕಚೇರಿ ಪುರಸಭೆ ಕಾರ್ಯಾಲಯ, ರೋಣ ತಾಲೂಕಿನ ಎಸ್ವಿ ಜೂನಿಯರ್ ಕಾಲೇಜ್ ಬೆಳವಣಿಕೆ, ಎಪಿಎಂಸಿ ಕಚೇರಿ ಹೊಳೆಆಲೂರ.
* ಗಜೇಂದ್ರಗಡ ಪಟ್ಟಣದ ಎಪಿಎಂಸಿ ಮಾರುಕಟ್ಟೆ, ರೈತ ಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನರೇಗಲ್. ಶಿರಹಟ್ಟಿ ಪಟ್ಟಣದ ತಹಸೀಲ್ದಾರ್ ಕಚೇರಿ, ಶಿರಹಟ್ಟಿ ತಾಲೂಕಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ಬೆಳ್ಳಟ್ಟಿ. ಲಕ್ಷ್ಮೇಶ್ವರ ಪಟ್ಟಣದ ಮುನ್ಸಿಪಲ್ ಕಾಪೋರೇಷನ್.
ವಿಶೇಷ ಸಾಂರ್ದಭಿಕ ರಜೆ ಇಂದು
ಪಶ್ಚಿಮ ಪದವೀಧರರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೋಂದಾಯಿತ ಅರ್ಹ ಪದವೀಧರ ಮತದಾರರಿಗೆ ಅ. 28ರಂದು ಜರುಗುವ ಚುನಾವಣೆಯಲ್ಲಿ ಮತದಾನ ಮಾಡಲು ರಾಜ್ಯ ಸರ್ಕಾರ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಿ ಆದೇಶಿಸಿದೆ ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಶಾಲೆ- ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಕೈಗಾರಿಕೆ ಸಂಸ್ಥೆಗಳು, ಸಹಕಾರಿ ರಂಗದ ಸಂಘ ಸಂಸ್ಥೆಗಳು, ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು, ಇತರ ಎಸ್ಟಾಬ್ಲಿಷ್ವೆುಂಟ್ಗಳಲ್ಲಿ ಕಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಂರ್ದಭಿಕ ರಜೆ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನ ಮಾಡುವ ವಿಧಾನ
ಪದವೀಧರ ಮತಕ್ಷೇತ್ರದ ಚುನಾವಣೆಯು ಪ್ರಾಶಸ್ಱ ಮತದಾನ ಪದ್ಧತಿ ಹೊಂದಿದೆ. ಮತದಾರರು ಅಭ್ಯರ್ಥಿಗಳ ಹೆಸರಿನ ಮುಂದೆ 1, 2, 3 ಹೀಗೆ ಎಲ್ಲ ಸ್ಪರ್ಧಿಗಳಿಗೆ ಪ್ರಾಶಸ್ಱವನ್ನು ಗುರುತಿಸಬೇಕು. ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳಿದ್ದು, ಮತಪತ್ರದಲ್ಲಿ ಪ್ರಾಶಸ್ಱವನ್ನು ಕನ್ನಡ, ರೋಮನ್ ಅಥವಾ ಇಂಗ್ಲಿಷ್ ಅಂಕಿಗಳಲ್ಲಿ ಮಾತ್ರ ನಮೂದಿಸಬೇಕು. ಮತದಾರ ತನ್ನ ಆಯ್ಕೆಗೆ ಅನುಗುಣವಾಗಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳಿಗೂ ಪ್ರಾಶಸ್ಱದ ಮತ ನೀಡಬಹುದು. ಆದರೆ ಓರ್ವ ಅಭ್ಯರ್ಥಿಯ ಹೆಸರಿನ ಮುಂದೆ ನೀಡಿದ ಅಂಕಿಯನ್ನು ಮತ್ತೊಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಪುನರಾವರ್ತಿಸಬಾರದು. ಮತ ಪತ್ರದಲ್ಲಿ ಮತದಾರರ ಗುರುತು, ಸಹಿ, ಹೆಸರು ಇತ್ಯಾದಿಗಳನ್ನು ಬರೆಯಬಾರದು. ಪದಗಳಲ್ಲಿ ಪ್ರಾಶಸ್ಱ ಸೂಚಿಸಿದರೆ ಮತ ತಿರಸ್ಕೃತವಾಗುವುದು. ಮತಗಟ್ಟೆಯೊಳಗೆ ಪೆನ್, ಇಂಕ್, ಕಡ್ಡಿಪೊಟ್ಟಣ, ಲೈಟರ್, ಪಾನೀಯ ಬಾಟಲಿ ಒಯ್ಯುವಂತಿಲ್ಲ. ಮೊಬೈಲ್, ಕ್ಯಾಮರಾ, ತಿಂಡಿ- ತಿನಿಸು, ಆಯುಧಗಳನ್ನು ನಿಷೇಧಿಸಲಾಗಿದೆ. ಮತಗಟ್ಟೆ ಅಧಿಕಾರಿ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ ಬಳಸಿ ಮತದಾನ ಮಾಡಬೇಕು ಎಂದು ಸ್ವೀಪ್ ಸಮಿತಿ ತಿಳಿಸಿದೆ.