ಜಿಲ್ಲೆ

ಬೆಂಗಳೂರು ಮೈಸೂರು ಅಕ್ಸೆಸ್ ಕಂಟ್ರೋಲ್ಡ್ ಹೆದ್ದಾರಿಯಲ್ಲಿ ಜಿಪಿಎಸ್ ಟೋಲ್ ಸಂಗ್ರಹಕ್ಕೆ ಸಿದ್ದತೆ? - ದೇಶದಲ್ಲೇ ಪ್ರಥಮ ಪ್ರಯತ್ನ

ರಾಮನಗರ: ಬೆಂಗಳೂರು - ಮೈಸೂರು ಅಕ್ಸೆಸ್ ಕಂಟ್ರೋಲ್ಡ್ ಹೆದ್ದಾರಿಯಲ್ಲಿ ಜಿಪಿಎಸ್ ಟೋಲ್ ಸಂಗ್ರಹಕ್ಕೆ ಪ್ರಾಯೋಗಿಕ ಚಾಲನೆ ನೀಡಲು ಕೇಂದ್ರ ಹೆದ್ದಾರಿ ಸಚಿವಾಲಯ ಸಿದ್ದತೆ ನಡೆಸಿದೆ.

ಜಿಪಿಎಸ್ ಆಧರಿಸಿ  ವಾಹನ ಹೆದ್ದಾರಿಯಲ್ಲಿ ಕ್ರಮಿಸಿದ ದೂರಕ್ಕೆ ಮಾತ್ರ ಟೋಲ್ ಸಂಗ್ರಹಿಸುವ ವ್ಯವಸ್ಥೆಯನ್ನು ಬೆಂಗಳೂರು - ಮೈಸೂರು ನಡುವಿನ ನೂತನ ಹೆದ್ದಾರಿ ಹಾಗೂ ದೆಹಲಿ - ಜೈಪುರ ಹೆದ್ದಾರಿಯಲ್ಲಿ ಜಾರಿಗೆ ತರಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ವಾಹನ ಎಷ್ಟು ದೂರು ಚಲಿಸುತ್ತದೋ ಅಷ್ಟು ದೂರಕ್ಕೆ ಟೋಲ್​ ಸಂಗ್ರಹಿಸುವ ಜಿಯೋ ಫೆನ್ಸಿಂಗ್ ಕೆಲಸವೂ ಸಹ ಆರಂಭಗೊಂಡಿದೆ.

ಕಳೆದ ಕೆಲವು ತಿಂಗಳ ಹಿಂದೆಯೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ದೇಶದಲ್ಲಿ ಈಗಾಗಲೇ ಸುಮಾರು 18 ಲಕ್ಷ ವಾಣಿಜ್ಯ ಬಳಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಆರಂಭದಲ್ಲಿ ಈ ವಾಹನಗಳು ಮಾತ್ರ ಜಿಪಿಎಸ್ ಟೋಲ್​ ಸಂಗ್ರಹ ವ್ಯವಸ್ಥೆ ಅಡಿಗೆ ಬರಲಿದ್ದು, ಈ ಪ್ರಯೋಗ ಯಶಸ್ವಿ ಆದರೆ ಉಳಿದ ಇತರೆ ವಾಹನಗಳು ಹಾಗೂ ಹೆದ್ದಾರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.