ದೀಪಾವಳಿಗಾಗಿ ಹಣತೆ ತಯಾರಿಸುತ್ತಿರುವ ಕಾರ್ಕಳದ ಚೇತನಾ ವಿಶೇಷ ಮಕ್ಕಳ ಶಾಲೆ ವಿದ್ಯಾರ್ಥಿಗಳು.  
ಜಿಲ್ಲೆ

ಬದುಕಿಗೆ ಬಣ್ಣಹಚ್ಚುವ ಕಾಯಕ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ದೀಪಾವಳಿ ಬಂದರೆ ಸಾಕು ಮಾರುಕಟ್ಟೆಗೆ ನಾನಾ ಬಗೆಯ ಗೂಡುದೀಪ, ಬಣ್ಣ ಬಣ್ಣದ ದೀಪ ಹಾಗೂ ಹಣತೆಗಳ ರಾಶಿ ಗೋಚರಿಸುತ್ತದೆ. ಆದರೆ ಕಾರ್ಕಳದಲ್ಲಿ ಭಿನ್ನ ಸಾಮರ್ಥ್ಯದ ಬುದ್ಧಿಮಾಂದ್ಯ ಮಕ್ಕಳು ಮಣ್ಣಿನ ಹಣತೆ ತಯಾರಿಸುತ್ತಿದ್ದು, ಮಾರುಕಟ್ಟೆಗಳಲ್ಲಿಯೂ ಉತ್ತಮ ಬೇಡಿಕೆ ಇದೆ.

ಕಾರ್ಕಳದ ಚೇತನಾ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ದೀಪಾವಳಿ ಸಂಭ್ರಮಕ್ಕೆ ಹಣತೆ ತಯಾರಿಸುವಲ್ಲಿ ನಿರತಯಾಗಿದ್ದಾರೆ. ಶ್ರವಣದೋಷ, ವಾಕ್‌ದೋಷ, ಬುದ್ಧಿಮಾಂದ್ಯ ಮತ್ತು ಆಟಿಸಂನಿಂದ ಬಳಲುತ್ತಿರುವ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಹಣತೆ ತಯಾರಿಸಿ ಅದಕ್ಕೆ ಸುಂದರ ಬಣ್ಣಹಚ್ಚುವ ಕಾಯಕ ಮಾಡುತ್ತಿದ್ದಾರೆ.

ಸಿಂಗಾಪುರದಿಂದಲೂ ಬೇಡಿಕೆ

ಸ್ಥಳೀಯವಾಗಿ ಹೊರಜಿಲ್ಲೆಯಿಂದ ಮಣ್ಣಿನ ಹಣತೆ ತರಿಸಿ ಅವುಗಳಿಗೆ ಬಣ್ಣ ಹಚ್ಚುವ ಕೆಲಸ ವಿದ್ಯಾರ್ಥಿಗಳು ಮಾಡುತ್ತಾರೆ. ಹಣತೆಗೆ ಕಾರ್ಕಳ ತಾಲೂಕಲ್ಲಿ ಮಾತ್ರವಲ್ಲದೆ ದೂರದ ಸಿಂಗಾಪುರದಿಂದಲೂ ಬೇಡಿಕೆ ಬರುತ್ತಿದೆ. ಕಳೆದ ವರ್ಷದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಬಾದಾಮಿ ಹಾಗೂ ನಾನಾ ಜಿಲ್ಲೆಯ ಜನತೆ ಹಣತೆ ಖರೀದಿಸಿದ್ದು, ಈ ವರ್ಷದಲ್ಲಿ ಬೇಡಿಕೆ ದುಪ್ಪಟ್ಟಾಗಿದೆ. ಪ್ರಸಕ್ತ ವರ್ಷದಲ್ಲಿ ಸಿಂಗಾಪುರದಿಂದ ನೂರು ಹಣತೆಗಳಿಗೆ ಆರ್ಡರ್ ಬಂದಿರುವುದು ವಿಶೇಷ.

ಸ್ವಾವಲಂಬಿ ಬದುಕಿಗಾಗಿ ತರಬೇತಿ

ಶಿಕ್ಷಣದ ಜತೆಗೆ ವಿಶೇಷ ಮಕ್ಕಳ ಶಾರೀರಿಕ, ಬೌದ್ಧಿಕ ವಿಕಸನಕ್ಕೂ ಗಮನಹರಿಸಬೇಕು ಹಾಗೂ ಎಲ್ಲರಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಆಶಯದಲ್ಲಿ ಅವರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಈ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಅವರ ಸರ್ವತೋಮುಖ ಬೆಳವಣಿಗೆಗೆ ನಾನಾ ಬಗೆಯ ಚಟುವಟಿಕೆ, ಕೌಶಲ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಬರೀ ಹಣತೆ ತಯಾರಿಯಲ್ಲಿ ಮಾತ್ರ ನಿಪುಣರಾಗಿರದೆ ಬಟ್ಟೆಯ ಕೈಚೀಲ, ಪೇಪರ್ ಕವರ್, ಸ್ಕ್ರೀನ್ ಪ್ರಿಂಟಿಂಗ್, ಹೊಲಿಗೆ, ಕಂಪ್ಯೂಟರ್ ತರಬೇತಿ, ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಕ್ಷಕರು ನಿರಂತರ ಪ್ರೋತ್ಸಾಹ ಮಾಡುತ್ತಾ ಬರುತ್ತಿದ್ದಾರೆ.

ಕೋರಿಯರ್ ಮೂಲಕ ರವಾನೆ

ವಿಶೇಷ ಮಕ್ಕಳು ತಯಾರಿಸಿದ ಹಣತೆ ಮಾರಾಟವನ್ನು ಸ್ಥಳೀಯವಾಗಿ ಮಾಡಲಾಗುತ್ತಿದ್ದು, ಹೊರ ಜಿಲ್ಲೆ ಹಾಗೂ ದೂರದ ಖರೀದಿದಾರರಿಗೆ ಕೋರಿಯರ್ ಮೂಲಕ ಕಳುಹಿಸಿಕೊಡುವ ವ್ಯವಸ್ಥೆ ಶಾಲೆ ವತಿಯಿಂದ ಮಾಡಲಾಗುತ್ತಿದೆ. 10ರೂ.ನಿಂದ ಸುಮಾರು 40 ರೂ. ವರೆಗೆ ವಿವಿಧ ಬಣ್ಣ ಹಾಗೂ ವಿನ್ಯಾಸದ ಹಣತೆಗಳು ಸಿದ್ಧವಾಗಿದೆ. ಕಳೆದ ವರ್ಷವೂ ಮಕ್ಕಳು ತಯಾರಿಸಿದ ಹಣತೆ ಮಾರಾಟ ಮಾಡಿ ಬಂದ ಹಣವನ್ನು ವಿಶೇಷ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಈ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಹಣತೆ ತಯಾರು ಮಾಡಿದ್ದು ಹೆಚ್ಚಿನ ಮಾರಾಟದ ನಿರೀಕ್ಷೆ ಹೊಂದಿದ್ದು, ಬರುವ ಲಾಭವನ್ನು ಮಕ್ಕಳಿಗೆ ಮೀಸಲಿಡುವ ಕಾರ್ಯ ಸಂಸ್ಥೆ ಮಾಡಿದೆ. ಹಣತೆ ಖರೀದಿಸಲು 9448725305 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.

ವಿದ್ಯಾರ್ಥಿಗಳಿಗೆ ಸೌಲಭ್ಯ

ಕಾರ್ಕಳದ ಭಾರತಿ ಸೇವಾ ಮಂಡಳಿ ಟ್ರಸ್ಟ್ ಅಡಿಯಲ್ಲಿ ಚೇತನಾ ವಿಶೇಷ ಮಕ್ಕಳ ಶಾಲೆ 2004ರಲ್ಲಿ ಆರಂಭಗೊಂಡು ಕಾರ್ಯಾಚರಿಸುತ್ತಿದೆ. ಪ್ರಸ್ತುತ 104 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು ಸುಮಾರು 28 ಸಿಬ್ಬಂದಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ, ಶಿರಸಿ, ಹಾವೇರಿ, ಬಾಗಲಕೋಟೆ, ಹಾಸನ, ಮೈಸೂರು, ಬೆಂಗಳೂರು, ಮುಂಬೈ ಸೇರಿದಂತೆ ನಾನಾ ಕಡೆಯ ವಿಕಲಾಂಗರು ಹಾಗೂ ಬುದ್ಧಿಮಾಂದ್ಯರು, ಕಲಿಕಾ ನ್ಯೂನತೆ ಇರುವ ಮಕ್ಕಳಿದ್ದು ಸ್ಥಳೀಯ ಮಕ್ಕಳಿಗೆ ಬಸ್ ವ್ಯವಸ್ಥೆ ಹಾಗೂ ದೂರದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯೂ ಇಲ್ಲಿದೆ.

ವಿಶೇಷ ಮಕ್ಕಳು ತಯಾರು ಮಾಡುತ್ತಿರುವ ಹಣತೆಗೆ ನಾಡಿನ ನಾನಾ ಕಡೆಗಳಿಂದ ಉತ್ತಮ ಬೇಡಿಕೆ ಬರುತ್ತಿದೆ. ಈಗಾಗಲೇ ಶಿವಮೊಗ್ಗ, ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಕಡೆಗಳಿಗೆ ಹಣತೆ ಕಳುಹಿಸಿಕೊಡಲಾಗಿದೆ. ಸಿಂಗಾಪುರದಿಂದ ಹಣತೆಯ ಜತೆಗೆ ಸ್ಮರಣಿಗೂ ಬೇಡಿಕೆ ಬಂದಿದೆ. -ಹೇಮಲತಾ ಚೇತನಾ ವಿಶೇಷ ಶಾಲೆ ಮುಖ್ಯ ಶಿಕ್ಷಕಿ, ದೀಪಾವಳಿ ಸಂದರ್ಭ ವಿಶೇಷ ಮಕ್ಕಳು ತಯಾರು ಮಾಡುವ ಹಣತೆಗಳಿಗೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿರುವುದು ಖುಷಿ ನೀಡಿದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳನ್ನು ತರಬೇತುಗೊಳಿಸಲಾಗುತ್ತಿದೆ. ನಿರಂತರ ವಿವಿಧ ಚಟುವಟಿಕೆಗಳನ್ನು ಇಲ್ಲಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ. -ರಘುನಾಥ್ ಶೆಟ್ಟಿ ಸಂಚಾಲಕರು, ಚೇತನಾ ವಿಶೇಷ ಶಾಲೆ, ಕಾರ್ಕಳ https://www.vijayavani.net/unfulfilled-promises-of-officials-and-peoples-representatives https://www.vijayavani.net/protest-march-by-udupi-tiger-disguises