ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪ್ರಯಾಣಿಕರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕುಂದಾಪುರದ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಡ್ ಕೌಂಟರ್ ಆರಂಭಿಸಲಾಗಿದ್ದು, ರಿಕ್ಷಾ ಚಾಲಕರು ಹಾಗೂ ಪ್ರಯಾಣಿಕರ ವರ್ಗ ಸಹಿತ ಸರ್ವರಿಗೂ ಅನುಕೂಲವಾಗಲಿದೆ. ಗುತ್ತಿಗೆದಾರರೂ ನಿಯಮಗಳನ್ನು ಮೀರಬಾರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ತಾಪಂ ಸಭಾಂಗಣದಲ್ಲಿ ಮಂಗಳವಾರ ರಿಕ್ಷಾ ಚಾಲಕರು, ರೈಲ್ವೆ ಅಧಿಕಾರಿಗಳು, ಆರ್‌ಟಿಒ, ಪೊಲೀಸ್, ರೈಲ್ವೆ ಯಾತ್ರಿಕರ ಸಂಘದ ಜತೆಗಿನ ಸಭೆಯಲ್ಲಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಪ್ರೀಪೇಡ್ ಕೌಂಟರ್ ಜಾರಿಯಾದ ಬಳಿಕ 50 ಇದ್ದ ರಿಕ್ಷಾಗಳ ಸಂಖ್ಯೆ 72ಕ್ಕೆ ಹೆಚ್ಚಳವಾಗಿದೆ. ರಿಕ್ಷಾ ಬಾಡಿಗೆ ಪ್ರಮಾಣ ಕುಸಿದಿದ್ದು, ಜತೆಗೆ ಹೊರಗಿನಿಂದ ಬರುವ ರಿಕ್ಷಾ ದರ ಕಡಿಮೆ ಇರುವ ಕಾರಣ ಪ್ರೀಪೇಡ್ ರಿಕ್ಷಾಗಳನ್ನು ಪ್ರಯಾಣಿಕರು ನಿರಾಕರಿಸುತ್ತಿದ್ದಾರೆ. ಸ್ಥಳ ಕಂದಾಯ ರೂಪದಲ್ಲಿ ಸಂಗ್ರಹಿಸುತ್ತಿರುವ ಕಂದಾಯ ಸ್ಥಗಿತಗೊಳಿಸಬೇಕು ಎಂದು ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದ ರಿಕ್ಷಾ ಚಾಲಕರಾದ ಚಂದ್ರ ಪೂಜಾರಿ, ರಾಜೇಂದ್ರ, ರಿಕ್ಷಾ ಚಾಲಕರ ಸಂಘದ ಶಂಕರ ಅಂಕದಕಟ್ಟೆ, ಸುರೇಶ್ ಪುತ್ರನ್, ಗಿರೀಶ್ ಕುಂದಾಪುರ ಮನವಿ ಮಾಡಿದರು.
ಗುತ್ತಿಗೆದಾರ ಧರ್ಮಪ್ರಕಾಶ್ ಉತ್ತರಿಸಿದ್ದು, ರೈಲ್ವೆ ಇಲಾಖೆಯ ಗುತ್ತಿಗೆ ನಿಯಮ ಪ್ರಕಾರ ದರ ಇದೆ. 150 ರೂ.ವರೆಗಿನ ಬಾಡಿಗೆಗೆ ಶೇ.9, ನಂತರ ಶೇ.6 ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಮೊದಲು ನೋಂದಣಿಯಾದ ಎಲ್ಲ ರಿಕ್ಷಾಗಳು ಬಾಡಿಗೆಗೆ ಸಿಗದ ಕಾರಣ ಇತರ ರಿಕ್ಷಾಗಳಿಗೂ ಅವಕಾಶ ನೀಡಲಾಗಿದ್ದು ನಿಲ್ದಾಣಕ್ಕೆ ಬರುವುದು 42 ರಿಕ್ಷಾಗಳು ಮಾತ್ರ ಎಂದರು.
ಆರ್‌ಟಿಒ ಇನ್‌ಸ್ಪೆಕ್ಟರ್ ಸತೀಶ್ ಶೆಟ್ಟಿ, ರೈಲು ಪ್ರಯಾಣಿಕರ ಸಮಿತಿಯ ವಿವೇಕ್ ನಾಯಕ್, ಪ್ರವೀಣ್ ಕುಮಾರ್, ಮನೋಜ್ ನಾಯರ್, ಉದಯ ಭಂಡಾರ್ಕರ್, ಎಸ್‌ಐ ಭೀಮಾಶಂಕರ್, ಕೊಂಕಣ ರೈಲ್ವೆಯ ದಿಲೀಪ್ ಭಟ್, ರೈಲು ಪ್ರಯಾಣಿಕರ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಉಪಸ್ಥಿತರಿದ್ದರು.
ರೈಲು ನಿಲ್ದಾಣದಲ್ಲಿರುವ ಪ್ರಿಪೇಡ್ ರಿಕ್ಷಾ ನಿಲ್ದಾಣ ಕೌಂಟರ್‌ನಲ್ಲಿ ಪ್ರಯಾಣಿಕರಿಗೆ ವಿಧಿಸುವ ಕಮಿಷನ್ ದರವನ್ನು ಇಳಿಸಬೇಕು. ರೈಲ್ವೆ ಇಲಾಖೆಯವರು ಪ್ರೀಪೇಡ್ ಕೌಂಟರ್‌ಗೆ ಭೇಟಿ ನೀಡಿ, ಒಂದು ವರ್ಷದಿಂದ ನಿಲ್ದಾಣಕ್ಕೆ ಬಾರದ ರಿಕ್ಷಾಗಳ ನೋಂದಣಿ ರದ್ದುಗೊಳಿಸಬೇಕು. 100 ರೂ.ವರೆಗೆ ಶೇ.10, ನಂತರ ಶೇ.5 ಮಾತ್ರ ಕಮಿಷನ್ ಪಡೆಯಬೇಕು. ಟಿಕೆಟ್ ಮಾಡುವ ಸಂದರ್ಭ ನಿರ್ದಿಷ್ಟ ಬಾಡಿಗೆ ನಮೂದಿಸಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಸಂಸದ ಕೋಟ ಶ್ರೀ ನಿವಾಸ ಪೂಜಾರಿ ಸೂಚನೆ ನೀಡಿದರು.