ಜಿಲ್ಲೆ

ಕಾರವಾರ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪ್ರೇಮಾ ಟಿಎಂಆರ್‌

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕಾ ಘಟಕದಿಂದ ಆಯೋಜಿಸುವ ಕಾರವಾರ ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ 15 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಸರ್ವಾಧ್ಯಕ್ಷರಾಗಿ ಕವಿಯಿತ್ರಿ, ಕತೆಗಾರ್ತಿ, ಲೇಖಕಿ, ಅಂಕಣಗಾರ್ತಿ ಪ್ರೇಮಾ ಟಿ.ಎಂ.ಆರ್. ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ನಡೆದ ಕಸಾಪ ಕಾರ್ಯಕಾರಿ ಮಂಡಳಿ ಹಾಗೂ ಆಜೀವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಅಧ್ಯಕ್ಷತೆಯಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯೊಂದನ್ನು ಸರ್ವಾಧ್ಯಕ್ಷರ ಆಯ್ಕೆಗೆ ರಚಿಸಲಾಗಿತ್ತು. ಸಮಿತಿ 8 ಹೆಸರುಗಳಲ್ಲಿ ಅಂತಿವಾಗಿ ಮಹಿಳಾ ಸಾಹಿತಿ ಪ್ರೇಮ ಟಿ. ಎಂ. ಅರ್. ಅವರನ್ನು ಆಯ್ಕೆ ಮಾಡಿತು ಎಂದು ಅವರು ತಿಳಿಸಿದ್ದಾರೆ.
ಪ್ರೇಮಾ ಪರಿಚಯ:
ಕುಮಟಾ ತಾಲೂಕಿನ ಕೂಜಳ್ಳಿಯ ಬೆಂಕಿಮನೆ ಎಂಬ ಕಲಾವಿದರ ಕುಟುಂಬದಲ್ಲಿ ಜನಿಸಿದ ಪ್ರೇಮಾ ಅವರು ತಂದೆ ದೇವಪ್ಪ ಯಕ್ಷಗಾನ ಕಲಾವಿದನಾದರೆ ದೊಡ್ಡಪ್ಪ ನಾರಾಯಣ ನಾಯ್ಕ ಯಕ್ಷಗಾನ ಭಾಗವತರಾಗಿದ್ದರು. ಅಣ್ಣ ಮೋಹನ ನಾಯ್ಕ ಕೂಜಳ್ಳಿ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದ ಮತ್ತು ಲೇಖಕರಾಗಿದ್ದರು. ಭಟ್ಕಳ ತಲಗೋಡು ಗ್ರಾಮವರಾಗಿದ್ದ ಎಲ್‌ಐಸಿ ಅಭಿವೃದ್ಧಿ ಅಽಕಾರಿ ಟಿ.ಎಂ.ಆರ್.ನಾಯ್ಕ ಅವರನ್ನು ವಿವಾಹವಾಗಿ ಬಂದಿದ್ದ ಪ್ರೇಮಾ ಪ್ರಸ್ತುತ ಕಾರವಾರದಲ್ಲಿ ನೆಲೆಸಿದ್ದಾರೆ. ವಿಲ್ಲು ಬರೆಯುತ್ತೇನೆ ಎಂಬ ಅವರ ಕವನ ಸಂಕಲನ ಪ್ರಕಟಗೊಂಡಿದೆ. ನಾಲ್ಕು ಲೇಖನಗಳ ಪುಸ್ತಕ, ಒಂದು ಕಥಾ ಸಂಕಲನ, ಎರಡು ಕವನ ಸಂಕಲನ, ಒಂದು ವಿಮರ್ಶಾ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ. ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ ಇವರು ಕಾರ್ಯಕ್ರಮ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.