ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ 3.60 ಕೋಟಿ ರೂ. ಅನುದಾನ ಮಂಜೂರಾಗಿದೆ. ಬೆಳ್ತಂಗಡಿ ತಾಲೂಕು ಕ್ರೀಡಾಂಗಣದ ಸ್ಥಳದಲ್ಲಿ 2.48 ಎಕರೆ ಜಾಗದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ತಾಲೂಕುಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ ಕುರಿತು ಮಂಗಳವಾರ ತಾಪಂ ಸಭಾಂಗಣದಲ್ಲಿ ದಲಿತ ಮುಖಂಡರ ಜತೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕರು ಅಂಬೇಡ್ಕರ್ ಭವನದ ನೀಲಿನಕ್ಷೆಯನ್ನು ಸಭೆಯ ಮುಂದಿಟ್ಟರು. ಈ ವೇಳೆ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿ ಶಾಸಕರ ಯೋಚನೆ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದರು. ಪಪಂ ವ್ಯಾಪ್ತಿಯ ರೆಂಕೆದಗುತ್ತು ಎಂಬಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ನೂತನ ತಾಲೂಕು ಕ್ರೀಡಾಂಗಣಕ್ಕೆ ಜಾಗ ಕಾಯ್ದಿರಿಸಿಲಾಗಿದೆ ಎಂದರು.
ಪ್ರಮುಖರಾದ ವಸಂತ ಬಿ.ಕೆ., ಸಂಜೀವ ಆರ್., ನೇಮಿರಾಜ ಕಿಲ್ಲೂರು, ನವೀನ್ ನೆರಿಯ, ರಾಜೇಶ್ ಕಳೆಂಜ, ಪ್ರಭಾಕರ ಶಾಂತಿಗೋಡ್ ಮತ್ತಿತರ ಪ್ರಮುಖರು ಅಂಬೇಡ್ಕರ್ ಪ್ರತಿಮೆ, ನಿರ್ವಹಣೆ, 800 ಸಾಮರ್ಥ್ಯದ ಸಭಾಭವನ ವಿಸ್ತರಣೆ, ಇತರ ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಪಪಂ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸದಸ್ಯ ಅಂಬರೀಷ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ್ ಉಪಸ್ಥಿತರಿದ್ದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ವಂದಿಸಿದರು. ತಾಲೂಕಿನ ವಿವಿಧ ಸಂಘಟನೆ ಪ್ರಮುಖರು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು.
ಅತಿ ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದ್ದು, ಅಂಬೇಡ್ಕರ್ ಭವನದಲ್ಲಿ 500 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಭವನ, ಸುಂದರ ಪಾರ್ಕ್ ನಿರ್ಮಾಣ, ವಾಕಿಂಗ್ ಟ್ರಾೃಕ್, ಅಂಬೇಡ್ಕರ್ ಅವರ ಜೀವನಾಧರಿತ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ ನಿರ್ಮಾಣದ ಯೋಚನೆ ಮಾಡಲಾಗಿದೆ. ಸೋಮವತಿ ನದಿಯ ತಟದ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ. ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ https://www.vijayavani.net/local-government-elections https://www.vijayavani.net/awareness-campaign-in-perla