ಉಡುಪಿ: ಅಭಿವೃದ್ಧಿ ಮೂಲಕ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ನ ಸಿದ್ಧಾಂತ. ದೇಶದಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಚಲಿತ ಮಾತುಗಳೇ ಇದಕ್ಕೆ ಉದಾಹರಣೆಯಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಹೇಳಿದರು.
ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನೈಋತ್ಯ ಶಿಕ್ಷಕರ ಮತ್ತು ಪರವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದಂತೆ ಈ ಎರಡೂ ಕ್ಷೇತ್ರದಲ್ಲಿಯೂ ಸಹ ಮತದಾರರು ಬದಲಾವಣೆ ಬಯಸಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಎಲ್ಲರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಕಂಕಣ ಬದ್ಧವಾಗಿದೆ. ಈ ಚುನಾವಣೆಯಲ್ಲಿ ಎಲ್ಲ ಮತದಾರರನ್ನು ತಲುಪಲು ಕಾರ್ಯಕರ್ತರಿಗೆ ಮಾತ್ರ ಸಾಧ್ಯವಿದೆ. ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಅವಧಿಯ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಿದರೆ ಗೆಲುವು ಸಾಧಿಸಬಹುದು. ಜನರು ಕೋಮು ಭಾವನೆ ಸ್ವೀಕರಿಸುವುದಿಲ್ಲ ಎನ್ನುವುದು ಕಳೆದ ವಿಧಾನಸಭಾ ಚುನಾವಣೆಯೇ ಉದಾಹಣೆಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಮುಖಂಡ ಎಂ.ಎ. ಗಫೂರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಸಾದರಾಜ್ ಕಾಂಚನ್, ಶಹೀದ್, ದಿನೇಶ್ ಹೆಗ್ಡೆ ಮುಳುವಳ್ಳಿ, ಕೃಷ್ಣಪ್ಪ ಸುಳ್ಯ, ಡಾ. ಪ್ರೊ.ಸುಧೀರ್ ಹೆಗ್ಡೆ, ನೀರೆ ಕೃಷ್ಣ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಶಂಕರ್ ಕುಂದರ್, ಸಂತೋಷ್ ಕುಲಾಲ್, ನವೀನಚಂದ್ರ ಶೆಟ್ಟಿ, ರಮೇಶ್ ಕಾಂಚನ್, ಶಂಕರ್ ಕುಂದರ್, ಸದಾಶಿವ ದೇವಾಡಿಗ, ಡಾ.ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಕುಶಲ ಶೆಟ್ಟಿ ಹಾಗೂ ಚುನಾವಣಾ ಉಸ್ತುವಾರಿಗಳು ಭಾಗವಹಿಸಿದ್ದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು. ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲ್ ವಂದಿಸಿದರು.