ಮಂಡ್ಯ: ಡಿ.20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ 3 ರಿಂದ 5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲು ಆಹಾರ ಸಮಿತಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಊಟದ ವ್ಯವಸ್ಥೆಗೆಂದು ಅಂದಾಜು 50 ಕೌಂಟರ್ ತೆರೆಯಬೇಕಾಗುತ್ತದೆ. ಆದ್ದರಿಂದ ಮೂರು ರೀತಿಯ ಊಟದ ಮೆನ್ಯೂ ಸಿದ್ಧಪಡಿಸಿಕೊಳ್ಳಿ. ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ 3 ದಿನಗಳ ಕಾಲ ಯಾವ ಊಟವೆಂದು ನೀಡಬಹುದೆಂದು ಅಂತಿಮವಾಗಿ ತೀರ್ಮಾನಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ವೇದಿಕೆ, ಆಹಾರ ಹಾಗೂ ವಸತಿ ಸಮಿತಿಗಳ ಕೆಲಸ ಪ್ರಮುಖವಾಗಿದೆ. ಆದ್ದರಿಂದ ಆ ಸಮಿತಿಯ ಅಧಿಕಾರಿಗಳು ಕಾರ್ಯಯೋಜನೆಯನ್ನು ಸಿದ್ಧಪಡಿಸಿ. ಮುಖ್ಯ ವೇದಿಕೆ, ಸಮಾನಾಂತರ ವೇದಿಕೆ, ಆಸನದ ವ್ಯವಸ್ಥೆ ಸೇರಿದಂತೆ ಹಲವಾರು ನಿರ್ಮಾಣ ಕೆಲಸಗಳಿರುತ್ತದೆ. ಇದರೊಂದಿಗೆ ಟೆಂಡರ್ ಕರೆಯಬೇಕಿದೆ. ಆದ್ದರಿಂದ ಈಗಿನಿಂದಲೇ ಕೆಲಸ ಚುರುಕುಗೊಳಿಸಿ. ವಸತಿಗಾಗಿ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿರುವ ಹೋಟೆಲ್, ವಸತಿ ಶಾಲೆ, ಸಮುದಾಯ ಭವನ, ಕಲ್ಯಾಣಮಂಟಪ, ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಚರ್ಚಿಸಿ. ಅಂತೆಯೇ ಸಮ್ಮೇಳನಕ್ಕೆ ಕಾಯ್ದರಿಸುವಂತೆ ಪತ್ರ ಬರೆಯಬೇಕು ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್ ಇತರರಿದ್ದರು.