ಮೂಲ್ಕಿ: ಸೀಮೆಗೆ ಕಳಶಪ್ರಾಯವಾಗಿರುವ ಮೂಲ್ಕಿಯ ಸಾರ್ವಜನಿಕ ಗಣೇಶೋತ್ಸವವು ಸುವರ್ಣಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮೂಲ್ಕಿ ತಾಲೂಕು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ಹೇಳಿದರು.
ಶ್ರೀಕ್ಷೇತ್ರ ಬಪ್ಪನಾಡಿನ ಜ್ಞಾನ ಮಂದಿರದಲ್ಲಿ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮಿತಿಯ ಕಾರ್ಯದರ್ಶಿ ಸುನೀಲ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಪ್ರತಿದಿನ ಅನ್ನ ಸಂತರ್ಪಣೆ ಜತೆಗೆ ಗಣೇಶೋತ್ಸವವನ್ನು ಊರಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸಂಘಟನೆ, ಸಾಮರಸ್ಯ, ಒಗ್ಗಟ್ಟಿನ ಮೂಲಕ ಆಚರಿಸಲು ಎಲ್ಲರ ಸಹಕಾರ ಮುಖ್ಯ. ಇದಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಯುವಕರಿಗೆ ಪ್ರಾಶಸ್ತ್ಯ ನೀಡಲಾಗಿದೆ ಎಂದರು.
ಸಮಿತಿ ಅಧ್ಯಕ್ಷ ಚಂದ್ರಶೇಖರ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿಯ 50ನೇ ವರ್ಷದ ಸಂಭ್ರಮ ಗಣೇಶೋತ್ಸವ ನಾಡಿಗೆ ಮಾದರಿಯಾಗಲಿ. ಎಲ್ಲರ ಸಹಕಾರವಿರಲಿ ಎಂದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ನರಸಿಂಹ ಭಟ್, ಗೋಪಾಲಕೃಷ್ಣ ಉಪಾಧ್ಯಾಯ, ಕೋಶಾಧಿಕಾರಿ ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಕಿಶೋರ್ ಶೆಟ್ಟಿ ಬಪ್ಪನಾಡು, ಮಹೀಮ್ ಹೆಗ್ಡೆ ಮತ್ತಿತರರು ಮಾತನಾಡಿದರು. ಸಂಜೀವ ದೇವಾಡಿಗ ವಂದಿಸಿದರು.