ಜಿಲ್ಲೆ

ಯುವ ಜನೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಟೌನ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನ.30ರಂದು ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನ.27 ರಂದು ನಡೆಯಲಿರುವ ಯುವ ಜನೋತ್ಸವ ಸ್ಫರ್ಧೆಯಲ್ಲಿ ಜಿಲ್ಲೆಯ 15 ವರ್ಷದಿಂದ 29 ವರ್ಷ ವಯೋಮಾನದೊಳಗಿನ ಯುವಕರು ಹಾಗೂ ಯುವತಿಯರು ಹೆಸರನ್ನು ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದೆ. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕ್ರಮಕೈಗೊಳ್ಳುವುದರ ಜತೆಗೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕು ಎಂದು ಹೇಳಿದರು. ಕ್ರೀಡಾಂಗಣದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇರಬೇಕು, ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಇರಬೇಕು, ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಅಗತ್ಯ ಕ್ರಮಕೈಗೊಳ್ಳಲಾಗುವುದು: ಯುವಜನೋತ್ಸವ ಕ್ರೀಡಾ ಸ್ಪರ್ಧೆ ಹಾಗೂ ಕಾರ್ಯಕ್ರಮ ಸಂಬಂಧ ಕ್ರೀಡಾಂಗಣದಲ್ಲಿ ಕುಡಿವ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ತಿಳಿಸಿದರು. ಯುವ ಜನೋತ್ಸವ ಸಂಬಂಧ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಅವರನ್ನು ಕರೆತರುವ ವ್ಯವಸ್ಥೆ ಸಂಬಂಧ ಸೂಚನೆಗಳನ್ನು ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಹೆಚ್ಚಿನ ವಿವರಗಳಿಗೆ 9980590960/ 8328673178 ಸಂಪರ್ಕಿಸುವಂತೆ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

 ಯುವ ಜನೋತ್ಸವ ಸ್ಪರ್ಧೆಗಳ ವಿವರ:

ಗುಂಪು ಸ್ಪರ್ಧೆಗಳು: ವಿಜ್ಞಾನ ಮೇಳ (ಗುಂಪು), ಜಾನಪದ ನೃತ್ಯ (ತಂಡ) (ಕನ್ನಡ,ಆಂಗ್ಲ,ಹಿಂದಿ ಭಾಷೆ), ಜಾನಪದ ಗೀತೆ (ತಂಡ) (ಕನ್ನಡ, ಆಂಗ್ಲ, ಹಿಂದಿ ಭಾಷೆ),

ವೈಯಕ್ತಿಕ ಸ್ಪರ್ಧೆಗಳು: ಜಾನಪದ ನೃತ್ಯ(ಕನ್ನಡ, ಆಂಗ್ಲ,ಹಿಂದಿ ಭಾಷೆ),ಜಾನಪದ ಗೀತೆ(ಕನ್ನಡ, ಆಂಗ್ಲ, ಹಿಂದಿ ಭಾಷೆ), ಕವಿತೆ ಬರೆಯುವುದು, ಕಥೆ ಬರೆಯುವುದು (ವೈಯಕ್ತಿಕ) ಸ್ಟೋರಿ ರೈಟಿಂಗ್ (1 ಸಾವಿರ ಪದಗಳು ಮೀರದಂತೆ) - (ಕನ್ನಡ, ಆಂಗ್ಲ ಹಿಂದಿ ಭಾಷೆ),ಚಿತ್ರ ಕಲೆ, ಮೊಬೈಲ್ ಛಾಯಾಗ್ರಹಣ ಸ್ಫರ್ಧೆ. ವಿಜ್ಞಾನ ಮೇಳ (ವೈಯಕ್ತಿಕ),ಯುವ ಚಿತ್ರ ಕಲಾ ಸ್ಫರ್ಧೆ,ಛಾಯಾಚಿತ್ರಣ (ವೈಯಕ್ತಿಕ) ಕವನ ಬರಹಗಾರರ ಸ್ಫರ್ಧೆ

ಯುವ ಕೃತಿ: ಗುಡಿ ಕೈಗಾರಿಕೆಯ ಕಲಾ ಪ್ರಕಾರ, ನೇಕಾರಿಕೆ ಅಥವಾ ಜವಳಿ, ಕೃಷಿ ಉತ್ಪನ್ನಗಳು