ಸಿರಿಗೇರಿ: ಜಿಲ್ಲಾದ್ಯಂತ ಪ್ರತಿ ತಿಂಗಳು 9 ಮತ್ತು 24ನೇ ತಾರೀಕಿನಂದು ಗಂಡಾಂತರ ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ಕೈಗೊಳ್ಳುವ ಕಾರ್ಯ ಆರಂಭವಾಗುತ್ತಿದ್ದು ನಿರಂತರವಾಗಿ ನಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶ್ ಬಾಬು ಹೇಳಿದರು.
ಇದನ್ನೂ ಓದಿ:ಮಾತೃತ್ವ ಅಭಿಯಾನ ಪರಿಶೀಲನೆ
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಪರಿಶೀಲನೆ ನಡೆಸಿ ಮಾತನಾಡಿದರು. ಚೊಚ್ಚಲ ಗರ್ಭಿಣಿ, ಕಡಿಮೆ ಎತ್ತರ, ಅಧಿಕ ರಕ್ತದೊತ್ತಡ, ಕಬ್ಬಿಣಾಂಶ ಕೊರತೆ, ಅವಳಿಭ್ರೂಣ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗುವುದು, ಮೊದಲ ಹೆರಿಗೆ ಸಿಸೇರಿಯನ್ ಇಂಥವರನ್ನು ನಿರ್ಲ್ಯಕ್ಷಿಸದೆ ನಿರಂತರ ನಿಗಾ ವಹಿಸಬೇಕು. ಗರ್ಭಿಣಿಯರ ತಾಯಿಕಾರ್ಡ್ ಪರಿಶೀಲಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಾಮಾನ್ಯವಾಗಿ 12 ವಾರದೊಳಗೆ ಗರ್ಭಿಣಿ ಎಂದು ತಿಳಿದ ನಂತರ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸುವಂತೆ ಸೂಚಿಸಬೇಕು. ಆರೋಗ್ಯ ಇಲಾಖೆಯಿಂದ ನೀಡುವ ತಾಯಿ ಕಾರ್ಡ್‌ನಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಬೇಕು. ವೈದ್ಯರ ಸೂಚನೆಯಂತೆ ಪ್ರತಿ ತಿಂಗಳು ತೂಕ, ರಕ್ತದ ಪ್ರಮಾಣ ಹಾಗೂ ಇತರ ಅಗತ್ಯ ಪರೀಕ್ಷೆಗಳನ್ನು ಮಾಡಿಸಬೇಕು. ಇದರಿಂದ ಹೆರಿಗೆ ಸಮಯದಲ್ಲಿ ಅನುಕೂಲವಾಗಲಿದೆ ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ತೀವ್ರ ರಕ್ತಹೀನತೆಯಿದ್ದಲ್ಲಿ ಸ್ಥಳೀಯವಾಗಿ ನೀಡುವ ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ ವಿಧಾನ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಸ್ಕಾನ್ ಮಾಡಿಸಲು ತಿಳಿಸಬೇಕು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಠ 3 ವರ್ಷ ಕಡ್ಡಾಯವಾಗಿ ಮುಂದೂಡಬೇಕು. ನಂತರ ಚುಚ್ಚುಮದ್ದು, ಕಾಪರ್-ಟಿ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದರು.
ಗರ್ಭಿಣಿಯರು ಗುಣಮಟ್ಟದ ಪೌಷ್ಟಿಕ ಆಹಾರ ಸೇವನೆಯೊಂದಿಗೆ ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಠ 180 ಅಥವಾ ರಕ್ತಹೀನತೆ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿ ಸೇವಿಸಬೇಕು. ದೈಹಿಕವಾಗಿ ಸದೃಢರಾಗಲು ಕ್ಯಾಲ್ಸಿಯಂ ಮಾತ್ರೆಗಳನ್ನು ನುಂಗಬೇಕು ಎಂದು ಡಿಎಚ್‌ಒ ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ವೈದ್ಯಾಧಿಕಾರಿ ತಿಪ್ಪಾರೆಡ್ಡಿ, ಡಿವಿಬಿಡಿಸಿಪಿ ಜಿಲ್ಲಾ ಸಲಹೆಗಾರ ಪ್ರತಾಪ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ, ಪಿಎಚ್‌ಸಿಒ ಗಂಗಮ್ಮ, ನರ್ಸಿಂಗ್ ಅಧಿಕಾರಿ ಈರಮ್ಮ ಇತರರಿದ್ದರು.