ಜಿಲ್ಲೆ

ಗರ್ಭಿಣಿಯರು ಆರೋಗ್ಯದತ್ತ ಗಮನ ಹರಿಸಿ, ರೋಟರಿ ಸಂಸ್ಥೆ ಅಧ್ಯಕ್ಷ ಕೆ. ವನರಾಜ ಸಲಹೆ, ಸಿರಿಧಾನ್ಯದ ಆಹಾರ ಕಿಟ್ ವಿತರಣೆ

ನೆಲಮಂಗಲ: ಭವಿಷ್ಯದ ದೃಷ್ಟಿಯಿಂದ ಮಕ್ಕಳ ಜತೆಗೆ ಗರ್ಭಿಣಿಯರ ಆರೋಗ್ಯ ಕಾಪಾಡುವುದು ಅಗತ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕೆ. ವನರಾಜ ಅಭಿಪ್ರಾಯಪಟ್ಟರು.

ನಗರದ ಸದಾಶಿವನಗರದ ರೋಟರಿ ಭವನದಲ್ಲಿ ರೋಟರಿ, ಇನ್ನರ್‌ವ್ಹೀಲ್ ಹಾಗೂ ಇ-ಕ್ಲಬ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಗರ್ಭಿಣಿಯರಿಗೆ ಸಿರಿಧಾನ್ಯದ ಆಹಾರ ಕಿಟ್ ವಿತರಣೆ ಮತ್ತು ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಕೋವಿಡ್-19 ಸೋಂಕು ಇರುವುದರಿಂದ ಗರ್ಭಿಣಿಯರು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ರೋಟರಿ ಸಂಸ್ಥೆಯಿಂದ ಪೋಲಿಯೋ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಗರ್ಭಿಣಿ ಮಹಿಳೆಯರು ಆರೋಗ್ಯವಾಗಿದ್ದಲ್ಲಿ ಜನಿಸುವ ಮಕ್ಕಳು ಆರೋಗ್ಯವಾಗಿ ಇರುತ್ತವೆ ಎಂದರು.

ಇನ್ನರ್‌ವ್ಹೀಲ್ ಅಧ್ಯಕ್ಷೆ ಮಂಜುಳಾ ಸಿದ್ದರಾಜು ಮಾತನಾಡಿ, ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವಿಸಬೇಕು. ಮಗುವಿನ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯದ ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದರು.

ತಾಲೂಕಿನ 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಿರಿಧಾನ್ಯಗಳಿದ್ದ ಆಹಾರದ ಕಿಟ್ ಹಾಗೂ ಮಾಸ್ಕ್ ವಿತರಿಸಲಾಯಿತು.

ರೋಟರಿ ಸಂಸ್ಥೆ ನಿರ್ದೇಶಕ ಎಸ್. ಗಂಗರಾಜು, ಸಿ.ಜಿ. ಮಂಜುನಾಥ್‌ಗೌಡ, ಎಂ.ಟಿ. ನವೀನ್‌ಕುಮಾರ್, ಶಿವಶಂಕರ್‌ಪ್ರಸಾದ್, ಎಲ್. ಕುಮಾರ್, ಸಿ. ರಾಜಶೇಖರ್, ಇನ್ನರ್‌ವ್ಹೀಲ್ ಸಂಸ್ಥೆ ಕಾರ್ಯದರ್ಶಿ ಎಚ್.ಎನ್. ದಿವ್ಯಾ, ಮಾಜಿ ಅಧ್ಯಕ್ಷೆ ಕೋಮಲಾ, ಸದಸ್ಯರಾದ ಶಾರದಾ ಸುಂದರೇಶ್, ಲತಾ, ಕುಸುಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ ಮತ್ತಿತರರು ಇದ್ದರು.