ಜಿಲ್ಲೆ

ಗರ್ಭಿಣಿ ಸಾವು, ಪತಿ ಸ್ಥಿತಿಯೂ ಗಂಭೀರ

ಹುಬ್ಬಳ್ಳಿ: ಬೆಳಗಾವಿಯ ಬಿಮ್ಸ್‌ನಿಂದ ಇಲ್ಲಿಯ ಕೆಎಂಸಿಆರ್‌ಐಗೆ ಶಿಫ್ಟ್ ಆಗಿದ್ದ ಗರ್ಭಿಣಿ ರಾಧಿಕಾ ಗಡ್ಡಿಹೊಳಿ (19) ಮಂಗಳವಾರ ಮೃತಪಟ್ಟಿದ್ದು, ಸುದ್ದಿ ತಿಳಿದು ಪತಿ ಮಲ್ಲೇಶಿ ಗಡ್ಡಿಹೊಳಿ (25) ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬಿಮ್ಸ್‌ನಿಂದ ಇಲ್ಲಿಯ ಕೆಎಂಸಿಆರ್‌ಐನ ತಾಯಿ ಮತ್ತು ಮಗು ವಿಭಾಗದಲ್ಲಿ ರಾಧಿಕಾ ಹೆರಿಗೆಗೆ ದಾಖಲಾಗಿದ್ದರು.

ರಾಧಿಕಾಗೆ ಇದು ಮೊದಲ ಹೆರಿಗೆ. ಮೊದಲು ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಫಿಟ್ಸ್ ಬಂದ ಕಾರಣ ಬಿಮ್ಸ್‌ಗೆ ರಾಧಿಕಾ ಅವರನ್ನು ದಾಖಲಿಸಲಾಗಿತ್ತು. ನಂತರ ಕೆಎಂಸಿಆರ್‌ಐಗೆ ಸೋಮವಾರ ಕರೆ ತರಲಾಗಿತ್ತು. ಈಗಾಗಲೆ ಆರು ಬಾರಿ ಫಿಟ್ಸ್ ಆಗಿತ್ತು. ಅಲ್ಲದೇ ರಾಧಿಕಾ ಹೊಟ್ಟೆಯಲ್ಲಿನ ಶಿಶು ಮೃತಪಟ್ಟಿತ್ತು. 8 ತಿಂಗಳು ಗರ್ಭಿಣಿಯಾಗಿದ್ದಲ್ಲದೇ ಬಿಪಿ ಮತ್ತು ಫಿಟ್ಸ್ ಬರುತ್ತಿತ್ತು. ಬೆಳಗಾವಿಯಲ್ಲಿ ಕಾರ್ಡಿಯಾಕ್ ಅಟ್ಯಾಕ್ ಕೂಡ ಆಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾಧಿಕಾ ಮೃತಪಟ್ಟಿದ್ದು, ಕುಟುಂಬದವರಿಗೆ ಶವ ಹಸ್ತಾಂತರಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿರುವ ಮಲ್ಲೇಶಿ ಸ್ಥಿತಿಯೂ ಗಂಭೀರವಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.