ಜಿಲ್ಲೆ

ಗರ್ಭಿಣಿ, ಬಾಣಂತಿಯರು ಸಮತೋಲಿತ ಆಹಾರ ಸೇವಿಸಲಿ

ಯಳಂದೂರು: ಗರ್ಭಿಣಿ, ಬಾಣಂತಿಯರ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶಯುತ ಆಹಾರವನ್ನು ಸೇವನೆ ಮಾಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ಎನ್‌ಆರ್‌ಎಲ್‌ಎಂನ ವ್ಯವಸ್ಥಾಪಕ ಶ್ರೀಕಾಂತ್ ಸಲಹೆ ನೀಡಿದರು.

ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ ಮಹಿಳಾ ಮತ್ತು ವಕ್ಕಳ ಅಭಿವೃದ್ಧಿ ಇಲಾಖೆ, ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳ ವತಿಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಹೆಚ್ಚಾಗಿ ಬೇಕರಿ ತಿನಿಸಿಗಳು, ಮೈದಾದಿಂದ ಮಾಡಿದ ಆಹಾರ ಸೇವನೆ ಮಾಡುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊಟ್ಟೆಯಿಂದ ಅಮೈನೋ ಆಸಿಡ್ ಲಭಿಸುತ್ತದೆ. ಬೆಣ್ಣೆ, ಸೊಪ್ಪು ತರಕಾರಿ, ಒಣ ಹಣ್ಣುಗಳು, ಪ್ರತಿನಿತ್ಯ 8 ಲೋಟಕ್ಕೂ ಹೆಚ್ಚು ನೀರು ಸೇವಿಸಬೇಕು. ಈ ಬಗ್ಗೆ ವೈದ್ಯರ ಸಲಹೆಯೊಂದಿಗೆ ಆಹಾರದ ಚಾರ್ಟ್ ಮಾಡಿಕೊಂಡು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಇದರಿಂದ ತಾಯಿ-ಮಗು ಹೆಚ್ಚು ಆರೋಗ್ಯವಂತವಾಗಿರುತ್ತಾರೆ. ಆಹಾರದಲ್ಲಿ ಸಕ್ಕರೆ ಹಾಗೂ ಉಪ್ಪಿನ ಬಳಕೆ, ಅಡುಗೆ ಎಣ್ಣೆಯನ್ನು ಆದಷ್ಟು ಕಡಿಮೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ, ಮಕ್ಕಳಿಗೆ ಅನ್ನಪ್ರಾಶನ ಹಾಗೂ ಅಕ್ಷರಾಭ್ಯಾಸ ಮಾಡಿಸಲಾಯಿತು. ಗ್ರಾಪಂ ಸದಸ್ಯರಾದ ಪ್ರವೀಣ್, ಮಹದೇವಯ್ಯ, ಆಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸರಸ್ವತಿ, ಆರೋಗ್ಯ ಕಾರ್ಯಕರ್ತೆ ಗೀತಾ, ಮುಖಂಡರಾದ ಮಹದೇವಯ್ಯ, ರವಿ, ಅಂಗನವಾಡಿ ಕಾರ್ಯಕರ್ತೆಯರಾದ ಶಶಿ, ಜ್ಯೋತಿ, ರಾಜೇಶ್ವರಿ, ನಾಗಮ್ಮ, ನಂಜಮ್ಮಣಿ, ಶೋಭಾ, ಮಲ್ಲಾಜಮ್ಮ, ಜಿ. ಮಹದೇವಮ್ಮ, ಮಾಲಾ ಇತರರು ಇದ್ದರು.